ನವದೆಹಲಿ: ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಮಂಗಳವಾರ ನೀಡಿದೆ. "ಅತ್ಯಂತ ಗಂಭೀರ ಪ್ರಕರಣಗಳಲ್ಲೂ ಆರೋಪಿಗೆ ಜಾಮೀನು ನೀಡುವುದು ಪ್ರಮುಖ ಆದ್ಯತೆಯಾಗಬೇಕು. ಇಲ್ಲವಾದಲ್ಲಿ ಅದು ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ" ಎಂದಿದೆ.
ದೇಶದ್ರೋಹದ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.
ಜಾಮೀನು ಮೊದಲ ಆದ್ಯತೆ: "ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಸೇರಿದಂತೆ ಯಾವುದೇ ಗಂಭೀರ ಪ್ರಕರಣಗಳಲ್ಲಿನ ಆರೋಪಿಗಳಿಗೆ ‘ಜಾಮೀನು ನೀಡುವುದು ಮೊದಲ ನಿಯಮ, ಜೈಲು ಶಿಕ್ಷೆ ವಿನಾಯಿತಿ ಎಂಬ ಕಾನೂನು ತತ್ವವನ್ನು ಅನುಸರಿಸಬೇಕು. ಅರ್ಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಆರೋಪಿಗಳಿಗೆ ಜಾಮೀನು ನಿರಾಕರಿಸಲು ಆರಂಭಿಸಿದರೆ ಅದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ" ಎಂದು ಪೀಠ ಹೇಳಿದೆ.
"ಪ್ರಾಸಿಕ್ಯೂಷನ್‌ನ ಮಾಡಿದ ಆರೋಪಗಳು ತುಂಬಾ ಗಂಭೀರವಾಗಿರಬಹುದು. ಆದರೆ, ಕಾನೂನಿನ ಪ್ರಕಾರ ಆರೋಪಿಗಳಿಗೆ ಜಾಮೀನು ನೀಡಲು ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯ. ಯಾವುದೇ ವಿಶೇಷ ಪ್ರಕರಣಗಳಲ್ಲೂ ಇದು ಅನ್ವಯ. ಇಲ್ಲವಾದಲ್ಲಿ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳು ಅನುಭವಿಸಲಾಗಲ್ಲ" ಎಂದು ಪೀಠ ತಿಳಿಸಿದೆ.
ದೇಶದ್ರೋಹಿ ಆರೋಪಿಗೆ ಜಾಮೀನು: ಜಲಾಲುದ್ದೀನ್ ಖಾನ್ ಎಂಬ ವ್ಯಕ್ತಿ ನಿಷೇಧಿತ ಭಯೋತ್ಪಾದನೆ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಿಗೆ ತನ್ನ ಮನೆ ಮೇಲಿನ ಮಹಡಿಯಲ್ಲಿ ಬಾಡಿಗೆಗೆ ನೀಡಿದ್ದಕ್ಕಾಗಿ ಆತನ ವಿರುದ್ಧ ಯುಎಪಿಎ ಮತ್ತು ಈಗ ನಿಷ್ಕ್ರಿಯಗೊಂಡಿರುವ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳವು, ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿತ್ತು. ಹಿಂಸಾಚಾರ, ಭಯೋತ್ಪಾದನೆಯ ವಾತಾವರಣ ಸೃಷ್ಟಿಸುವುದು, ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವುದು ಆರೋಪಿಗಳ ಉದ್ದೇಶವಾಗಿತ್ತು. ಆರೋಪಿಗಳು ಫುಲ್ವಾರಿ ಶರೀಫ್ ಎಂಬ ಬಿಹಾರದ ಪಾಟ್ನಾದಲ್ಲಿರುವ ವ್ಯಕ್ತಿಯ ಜೊತೆಗೂ ಸಂಪರ್ಕ ಹೊಂದಿದ್ದಾರೆ. ಹಿಂಸಾಚಾರಕ್ಕೆ ತರಬೇತಿ ನೀಡಲು ಮತ್ತು ಕ್ರಿಮಿನಲ್ ಪಿತೂರಿ ನಡೆಸಲು ಸಭೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿತ್ತು.
ಇದರಿಂದ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಕೋರ್ಟ್‌ಗೆ ಆಕ್ಷೇಪ ಸಲ್ಲಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ದೇಶದ್ರೋಹಿ ಆರೋಪಿತ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಿದೆ.