ಚೆನ್ನೈ: ತಮಿಳು ನಟ ವಿಜಯ್ ಹುಟ್ಟುಹಬ್ಬದ ನಿಮಿತ್ತ ತಮಿಳುನಾಡು ವಿಕ್ಟರಿ ಕಳಗಂ ಚೆನ್ನೈನಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ ಬಾಲಕನೊಬ್ಬನ ಕೈಗೆ ಬೆಂಕಿ ತಗುಲಿದ ಘಟನೆ ಚೆನ್ನೈನ ನೀಲಂಕಾರೈನಲ್ಲಿ ನಡೆದಿದೆ. ಬೆಂಕಿ ತಾಗಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಜಯ್ ಅವರ 50ನೇ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ತಮಿಳುನಾಡಿನ ವಿವಿಧೆಡೆ ಮಕ್ಕಳಿಗಾಗಿ ಸಾಹಸ ಕಾರ್ಯಕ್ರಮ ಏರ್ಪಡಿಸಿದ್ದರು. ಅದರಂತೆ ನೀಲಂಕಾರೈನಲ್ಲಿ ಕೈಗೆ ಪೆಟ್ರೋಲ್ ಸುರಿದುಕೊಂಡು ಟೈಲ್ಸ್ ಮತ್ತು ಹೆಂಚು ಒಡೆಯುವ ಸಾಹಸ ಏರ್ಪಡಿಸಲಾಗಿತ್ತು. ಸಾಹಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಕನೊಬ್ಬ, ಕೈಗೆ ಪೆಟ್ರೋಲ್ ಸುರಿದುಕೊಂಡು ಹೆಂಚು ಒಡೆಯುವ ಸಾಹಸ ಮಾಡಿದ್ದಾನೆ. ಆದರೆ, ಈ ವೇಳೆ ಬೆಂಕಿಯು ಬಾಲಕನ ಕೈಗೆ ಹೊತ್ತಿಕೊಂಡಿದ್ದು, ಅವಾಂತರ ಸೃಷ್ಟಿಸಿಯಾಗಿದೆ. ತಕ್ಷಣ ಬೆಂಕಿ ಆರಿಸಲು ಪ್ರಯತ್ನ ಪಟ್ಟರೂ ಸಹ ಅದು ಆತನ ಕೈತುಂಬಾ ಆವರಿಸಿಕೊಂಡಿದೆ. ಬಾಲಕನ ಕಿರುಚಾಟದ ಬಳಿಕ ಆರಿಸಲು ಬಂದ ಪಕ್ಕದಲ್ಲಿದ್ದ ಪೆಟ್ರೋಲ್ ಹಿಡಿದಿದ್ದ ವ್ಯಕ್ತಿಗೂ ಕೂಡ ಬೆಂಕಿ ತಾಗಿದೆ. ಇದೀಗ ಬಾಲಕನನ್ನು ಚಿಕಿತ್ಸೆಗಾಗಿ ನೀಲಂಗರೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಬಾಲಕನ ಕೈಗೆ ಬೆಂಕಿ ತಾಗಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ನಡೆದ ಈ ಅಗ್ನಿ ಅವಘಡ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.
ನೀರಿನ ಕ್ಯಾನ್‌ಗಳಲ್ಲಿ ಪೆಟ್ರೋಲ್ ಖರೀದಿಸುವುದು ಕಾನೂನು ಬಾಹಿರ. ಹೀಗಿರುವಾಗ ವಿಜಯ್ ಅಭಿಮಾನಿಗಳು ವಾಟರ್ ಕ್ಯಾನ್ಗಳಿಂದ ಪೆಟ್ರೋಲ್ ಖರೀದಿಸಿ ಈ ಸಾಹಸಕ್ಕೆ ಕೈ ಹಾಕಿರುವುದು ಇದೀಗ ಬೆಳಕಿಗೆ ಬಂದಿದೆ. ಅಲ್ಲದೇ ಈ ರೀತಿಯ ಸಾಹಸ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಅನುಮತಿಯನ್ನೂ ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬೆಂಗಳೂರು: ಟೆರೇಸ್ ಮೇಲಿಂದ ಜಾರಿ ಬಿದ್ದು, ಪತಿ ಕೈಯಲ್ಲಿ ನೇತಾಡಿದ ಮಹಿಳೆ! - Woman Slipped From Terrace