ಧಾರಾಶಿವ (ಮಹಾರಾಷ್ಟ್ರ): ವಿಷಯುಕ್ತ ಆಹಾರ ಸೇವಿಸಿ 35 ಜನರು ಅಸ್ವಸ್ಥಗೊಂಡಿರುವ ಘಟನೆ ಧಾರಾಶಿವ ತಾಲೂಕಿನ ಪರ್ತಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸ್ವಾತಿ ತಾನಾಜಿ ಗಾಯಕವಾಡ ಎಂಬುವರ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅತಿಥಿಗಳಿಗಳಿಗಾಗಿ ಮಹಾರಾಷ್ಟ್ರದ ವಿಶೇಷ ಖಾದ್ಯ ಪುರನ್ ಪೋಲಿ (ಪೊಂಗಲ್) ತಯಾರಿಸಲಾಗಿತ್ತು. ಈ ಆಹಾರ ಸೇವಿಸಿದ 35 ಜನರಲ್ಲಿ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರೇ ಇದ್ದು, ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಎಲ್ಲರನ್ನೂ ಧಾರಾಶಿವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಂತಿ-ಭೇದಿ: ಭಾನುವಾರ ಸಂಜೆ ಸ್ವಾತಿ ತಾನಾಜಿ ಗಾಯಕವಾಡ ಅವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಮಹಿಳೆಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಪುರನ್ ಪೋಲಿ ಸೇವಿಸಿದ ಅತಿಥಿಗಳಲ್ಲಿ ಸುಮಾರು 20 ಗಂಟೆಗಳ ನಂತರ ವಾಂತಿ - ಭೇದಿ ಕಾಣಿಸಿಕೊಂಡಿದೆ. ಒಬ್ಬರ ಬಳಿಕ ಮತ್ತೊಬ್ಬರಂತೆ ಸುಮಾರು 35 ಜನರಲ್ಲಿ ಆರೋಗ್ಯದ ಏರುಪೇರು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಧಾರಾಶಿವ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಶಾಂತ್ ರೇವಾಡ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪುರಂ ಪೋಲಿ ಸೇವಿಸಿದವರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಬುಧವಾರ ಸಂಜೆ ಎಲ್ಲರನ್ನೂ ಧಾರಾಶಿವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಅಸ್ವಸ್ಥಗೊಂಡವರೆಲ್ಲ ಸದ್ಯ ಆರೋಗ್ಯವಾಗಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯ ಪ್ರಶಾಂತ್ ರೇವಾಡ್ಕರ್ ಹೇಳಿದ್ದಾರೆ.
ಮಹಾಪ್ರಸಾದದಿಂದ ಭಕ್ತರು ಅಸ್ವಸ್ಥ: ಇಂತಹದ್ದೇ ಘಟನೆ ನಾಂದೇಡ್ನಲ್ಲಿಯೂ ನಡೆದಿತ್ತು. ನಾಂದೇಡ್ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಕ್ತರು ವಿಷಪೂರಿತ ಮಹಾಪ್ರಸಾದ ಸೇವಿಸಿದ ಆಘಾತಕಾರಿ ಘಟನೆ ನಡೆದಿತ್ತು. ಲೋಹಾ ತಾಲೂಕಿನ ಕೋಷ್ಟವಾಡಿ ಗ್ರಾಮದಲ್ಲಿ ಸಂತ ಬಾಳುಮಾಮರ ಧಾರ್ಮಿಕ ಕಾರ್ಯಕ್ರಮವಾದ ಪಲ್ಲಕಿ ಉತ್ಸವದಲ್ಲಿ ಈ ದುರಂತ ಸಂಭವಿಸಿತ್ತು. ಅಸ್ವಸ್ಥಗೊಂಡ ಎಲ್ಲ ಭಕ್ತರನ್ನು ರಾತ್ರಿಯೇ ನಾಂದೇಡ್‌ನ ಲೋಹಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸ್ಥಳೀಯ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ. ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಬಂದ ಭಕ್ತರಿಗೆ ಭಗರ್ ಎಂಬ ಮಹಾಪ್ರಸಾದ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ಮಹಾಪ್ರಸಾದ ಸೇವಿಸಿದ ಸಾವಿರಕ್ಕೂ ಹೆಚ್ಚು ಭಕ್ತರು ಅಸ್ವಸ್ಥ