ಬೆಂಗಳೂರು: ಇಂದು ವಿಶ್ವ ಹೆಪಟೈಟಿಸ್ ದಿನ. ಹೆಚ್ಚುತ್ತಿರುವ ಹೆಪಟೈಟಿಸ್ ಕಾಯಿಲೆ ಕುರಿತು ವಿಶೇಷ ಜಾಗೃತಿ ಮೂಡಿಸಲು ಈ ದಿನವನ್ನು 'one Life, one Liver' ಥೀಮ್ನಡಿ ಆಚರಿಸಲಾಗುತ್ತದೆ. ಹೆಪಟೈಸಿಸ್ ಎಂಬ ವೈರಸ್ನಿಂದ ಯಕೃತ್ತಿನಲ್ಲಿ (ಲಿವರ್) ಸೋಂಕು ಉಂಟಾಗುತ್ತದೆ. ಹೆಪಟೈಟಿಸ್ ಕಾಯಿಲೆ ಅಪಾಯಕಾರಿಯಾಗಿದ್ದು, 2030ರೊಳಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಭಾರತ ಹೊಂದಿದೆ.
ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮವು ಒಂದು ಸಮಗ್ರ ಯೋಜನೆಯಾಗಿದ್ದು, ಈ ಮೂಲಕ ಹೆಪಟೈಟಿಸ್ 'ಎ, ಬಿ, ಸಿ, ಡಿ ಮತ್ತು ಇ' ಯನ್ನು ತಡೆಗಟ್ಟುವ, ನಿಯಂತ್ರಣ ಮಾಡುವ ಹಾಗೂ 2030ರ ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿ ಇದೆ.
ಏನಿದು ಹೆಪಟೈಟಿಸ್ ಕಾಯಿಲೆ? : ಯಕೃತ್ತಿನಲ್ಲಿ (ಲಿವರ್) ಉರಿಯೂತ ಉಂಟು ಮಾಡುವ ಲಕ್ಷಣಗಳಿರುವ ಕಾಯಿಲೆಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ಹೆಪಟೈಟಿಸ್ ವೈರಸ್‌ಗಳಿಂದ ಹರಡುತ್ತದೆ. ಹೆಪಟೈಟಿಸ್, ಯಕೃತ್ತನ್ನು ಅಥವಾ ಪಿತ್ತಜನಕಾಂಗವನ್ನು ನಿಧಾನವಾಗಿ ನಾಶಪಡಿಸುವ ಒಂದು ಕಾಯಿಲೆ. ಹೆಪಟೈಟಿಸ್ ಸೋಂಕಿನಲ್ಲಿ ಎ, ಬಿ, ಡಿ, ಇ ಎಂಬ ವಿಧಗಳಿವೆ. ಹೀಗಾಗಿ ಈ ರೋಗದ ವಿರುದ್ಧ ಮುನ್ನೆಚ್ಚರಿಕೆ ವಹಿಸುವುದು, ಈ ರೋಗದ ಲಕ್ಷಣಗಳನ್ನು ಅರಿಯುವುದು ಬಹಳ ಮುಖ್ಯ. ಆದರೆ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಲ್ಲಿ ನಿರ್ಲಕ್ಷ್ಯ ಭಾವನೆ ಇದೆ. ಈ ಕಾರಣದಿಂದಾಗಿ ಲಕ್ಷಾಂತರ ಜನರು ಹೆಪಟೈಟಿಸ್ನಿಂದಾಗಿ ಸಾವಿಗೀಡಾಗಿದ್ದಾರೆ.
ಹೆಪಟೈಟಿಸ್ ಎ ಮತ್ತು ಇ ಅಷ್ಟು ಅಪಾಯಕಾರಿಯಲ್ಲ. ಆದರೆ ಹೆಪಟೈಟಿಸ್ ಬಿ, ಸಿ ಮತ್ತು ಡಿ ವೈರಸ್ಗಳು ಯಕೃತ್ತಿನ ಶಕ್ತಿ ಕುಂದಿಸುತ್ತದೆ. ಕ್ರಮೇಣ ಯಕೃತ್ತಿನ ಕ್ಯಾನ್ಸರ್ಗೆ ಇದು ಕಾರಣವಾಗುತ್ತದೆ. ಹೀಗಾಗಿ ಹೆಪಟೈಟಿಸ್ ದಿನವನ್ನು ಈ ವೈರಸ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶದಿಂದ ಆಚರಿಸಲಾಗುತ್ತದೆ.
ಹೆಪಟೈಟಿಸ್ ಪತ್ತೆ ಹೇಗೆ? : ರಕ್ತ ಪರೀಕ್ಷೆಗಳಿಂದ ಹೆಪಟೈಟಿಸ್ ಬಿ ವೈರಸ್ ಅನ್ನು ಕಂಡುಹಿಡಿಯಬಹುದು. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಪತ್ತೆಗಾಗಿ ಜನರು ಸ್ವಯಂಪ್ರೇರಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ವಿಷಯವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ಗಳು 10 ರಿಂದ 15 ವರ್ಷಗಳವರೆಗೆ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಂತಿಮವಾಗಿ ಪಿತ್ತಜನಕಾಂಗವು ಸಂಪೂರ್ಣವಾಗಿ ಅಸಮರ್ಥವಾಗುತ್ತದೆ. ಆ ಹಂತದಲ್ಲಿ ಪಿತ್ತಜನಕಾಂಗದ ಕಸಿ ಹೊರತುಪಡಿಸಿ ಯಾವುದೇ ಚಿಕಿತ್ಸೆಯು ಕಾರ್ಯನಿರ್ವಹಿಸುವುದಿಲ್ಲ.
ಹೆಪಿಟೈಸಿಸ್ ಲಕ್ಷಣಗಳಿವು..:
- ಹೊಟ್ಟೆ ನೋವು, ಉರಿ
- ಅಜೀರ್ಣ ಸಮಸ್ಯೆ ಮತ್ತು ಡಯೇರಿಯಾ
- ಸಂಧಿ ನೋವು
- ಹಳದಿ ಬಣ್ಣದ ಮೂತ್ರ
- ಅಶಕ್ತಕೆ ಹೆಚ್ಚುವುದು
- ವಾಂತಿ ಮತ್ತು ವಾಕರಿಕೆ
ನಿಯಂತ್ರಣ ವಿಧಾನಗಳು..:
- ಸರಿಯಾದ ಜೀವನಶೈಲಿ ಅಳವಡಿಸಿಕೊಳ್ಳುವುದು
- ಹೆಪಟೈಟಿಸ್ - ಬಿ ಲಸಿಕೆ ಹಾಕಿಸುವಿಕೆ (ನವರಾಜ ಶಿಶು, ಆರೋಗ್ಯ ಕಾರ್ಯಕರ್ತರು ಮತ್ತು ಹೆಚ್ಚು ಸೋಂಕಿನ ಅಪಾಯ ಉಳ್ಳವರು)
- ಸುರಕ್ಷಿತ ರಕ್ತ ಮತ್ತು ಅದರ ಉತ್ಪನ್ನಗಳ ಬಳಕೆ
- ಸುರಕ್ಷಿತ ಚುಚ್ಚುಮದ್ದು ನೀಡುವಿಕೆ
- ಅಲ್ಕೋಹಾಲ್ನಿಂದ ದೂರು ಇರುವುದು
- ಕಡಿಮೆ ಕೊಬ್ಬಿನಾಂಶ ಇರುವ ಡೈರಿ ಉತ್ಪನ್ನಗಳ ಸೇವನೆ ಕಡಿಮೆ ಮಾಡುವುದು
- ಸೀಜನಲ್ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದು
- ಸ್ವಚ್ಛ ನೀರು, ಸ್ವಚ್ಛ ಶೌಚಾಲಯ ಉಪಯೋಗ ಹಾಗೂ ನೈರ್ಮಲ್ಯ ಕಾಪಾಡುವುದು
ಸೌಲಭ್ಯಗಳು: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಕಾಯಿಲೆಗೆ ಉಚಿತ ತಪಾಸಣೆ ಹಾಗೂ ಪ್ರಯೋಗಾಲಯ ಸೇವೆಗಳು, ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ / ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ತಪಾಸಣೆ, ಹೆಚ್ಚಿನ ಪ್ರಯೋಗಾಲಯ ಸೇವೆಗಳು ಹಾಗೂ ಚಿಕಿತ್ಸೆ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Menstrual cup: ಮುಟ್ಟಿನ ಕಪ್: ಮಹಿಳೆಯರು ತಿಳಿಯಲೇ ಬೇಕಿರುವ ವಿಚಾರಗಳಿವು..