ನಡಿಗೆ (ವಾಕಿಂಗ್) ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ನಡಿಗೆ ದಿನ ಆಚರಣೆ ಮಾಡಲಾಗುತ್ತದೆ. ವಾಕಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಪ್ರಯೋಜನಗಳಿವೆ. ಇದೇ ಕಾರಣಕ್ಕೆ ಯುವಜನರೇ ಇರಲಿ ಅಥವಾ ಹಿರಿಯರಿರಲಿ ದಿನದಲ್ಲಿ ಕನಿಷ್ಠ ಪಕ್ಷ 20 ನಿಮಿಷ ವಾಕ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬ ಸಲಹೆಯನ್ನು ವೈದ್ಯರು ನೀಡುತ್ತಾರೆ.
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ 2007ರಲ್ಲಿ ನಡಿಗೆಯ ಮಹತ್ವ ಸಾರುವ ಉದ್ದೇಶದಿಂದ ಇದಕ್ಕೆಂದೇ ಒಂದು ದಿನ ನಿಗದಿ ಮಾಡಿದೆ. ಅದರನುಸಾರ ಪ್ರತಿ ವರ್ಷ ಏಪ್ರಿಲ್ ತಿಂಗಳ ಮೊದಲ ಬುಧವಾರವನ್ನು ರಾಷ್ಟ್ರೀಯ ನಡಿಗೆ ದಿನ ಎಂದು ಪರಿಗಣಿಸಲಾಗಿದೆ. ಪ್ರಸ್ತುತ 2023ರಲ್ಲಿ ರಾಷ್ಟ್ರೀಯ ನಡಿಗೆ ದಿನ ಏಪ್ರಿಲ್ 5ರಂದು ಬಂದಿದೆ. ಈ ದಿನದಂದು ನಡಿಗೆಯ ಪ್ರಯೋಜನ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತದೆ. ಆರೋಗ್ಯದಿಂದಿರಲು ದೈಹಿಕ ಚಟುವಟಿಕೆ ಅಗತ್ಯ. ಭಾರಿ ಪ್ರಮಾಣದ ದೈಹಿಕ ಕಸರತ್ತು ನಡೆಸದೇ ಇದ್ದರೂ ವಾಕಿಂಗ್ ಅಂತೂ ಅತ್ಯಗತ್ಯ. ಇದೊಂದು ಚಟುವಟಿಕೆ ನಿಮ್ಮನ್ನು ಅನಾರೋಗ್ಯದಿಂದ ಕಾಪಾಡುತ್ತದೆ.
ವರದಿಯನುಸಾರ, ವಾಕಿಂಗ್ ಅನ್ನು ಪ್ರತಿ ದಿನ ಮಾಡದೇ ಹೋದರೂ ಕಡೆ ಪಕ್ಷ ವಾರದಲ್ಲಿ ನಾಲ್ಕು ದಿನವಾದರೂ ಮಾಡಿ. ಇದರಿಂದ ಹೃದಯಾಘಾತ ಅಪಾಯವೂ ಕಡಿಮೆಯಾಗುತ್ತದೆ. ಭಾರತದಲ್ಲಿ ಹೃದಯ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ದಿನಚರಿಯಲ್ಲಿ ನಡಿಗೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಉತ್ತಮ ನಡಿಗೆ ಅಭ್ಯಾಸದಿಂದ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಂಭವ ತಗ್ಗುತ್ತದೆ.
ವೈದ್ಯರು ಮತ್ತು ತಜ್ಞರ ಪ್ರಕಾರ, ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು. ಇದು ನರದಲ್ಲಿ ಸಂಗ್ರಹವಾಗುವ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಪ್ರತಿನಿತ್ಯ ಕೆಲವು ನಿಮಿಷ ವಾಕ್ ಮಾಡುವುದರಿಂದ ದೇಹ ಕ್ರಿಯಾಶೀಲವಾಗಿರುವ ಜೊತೆಗೆ ಮನಸ್ಸಿಗೂ ಉಲ್ಲಾಸ ಮೂಡುತ್ತದೆ. ಜಿಮ್, ಭಾರಿ ವ್ಯಾಯಾಮ ಮಾಡಲು ಸಾಧ್ಯವಾಗದೇ ಇರುವವರು ನಿಧಾನ ನಡಿಗೆಯನ್ನು ರೂಢಿಸಿಕೊಳ್ಳಿ. ಇದು ದೇಹವನ್ನು ಫಿಟ್ ಆಗಿಡುವ ಜೊತೆಗೆ ಚರ್ಮದ ಆರೋಗ್ಯಕ್ಕೂ ಲಾಭ ನೀಡುತ್ತದೆ.
ಅಧ್ಯಯನಗಳಂತೆ, ವಾರದಲ್ಲಿ 8 ಸಾವಿರ ಹೆಜ್ಜೆಗಳ ನಡಿಗೆ ರೂಢಿಸಿಕೊಳ್ಳುವುದರಿಂದ ಅಕಾಲಿಕ ಸಾವು ತಡೆಯಬಹುದು. ವಾಕಿಂಗ್ ಮಾಡುವುದರಿಂದ ಹೃದಯಸಂಬಂಧಿ ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಉಂಟಾಗುವ ಅವಧಿಪೂರ್ವ ಸಾವು ತಡೆಯಬಹುದು. ಮಧ್ಯಮ- ತೀವ್ರತೆಯ ದೈಹಿಕ ಚಟುವಟಿಕೆಗಳಿಂದಾಗಿ ಉತ್ತಮ ಫಲಿತಾಂಶಗಳನ್ನೂ ಕಾಣಬಹುದಾಗಿದೆ.
ನಡಿಗೆಯಿಂದ ಆಗುವ ಇತರೆ ಲಾಭಗಳು: ಸಾಮಾನ್ಯ ಅಥವಾ ಬಿರುಸಿನ ನಡಿಗೆಯಿಂದ ದೇಹದ ತೂಕ ನಿರ್ವಹಣೆ ಮಾಡುವುದರ ಜೊತೆಗೆ ಕ್ಯಾಲೊರಿ ನಷ್ಟ ಮಾಡಬಹುದು. ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ, ಕೀಲು ನೋವಿನ ಸಮಸ್ಯೆಗೆ ಪರಿಹಾರವಿದೆ. ನಡಿಗೆಯಿಂದಾಗಿ ಸೋಂಕು ಮತ್ತು ಶೀತದ ಅಪಾಯ ತಪ್ಪಿಸಬಹುದು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಡಿಗೆ ಪರಿಣಾಮಕಾರಿಯಾಗಿ ಶಕ್ತಿಯ ವೃದ್ಧಿಗೆ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಖಿನ್ನತೆಯ ಆತಂಕ ಮತ್ತು ನಕಾರಾತ್ಮಕ ಮನಸ್ಥಿತಿ ಹೋಗಲಾಡಿಸಬಹುದು.
ಇದನ್ನೂ ಓದಿ: ಅಕಾಲಿಕ ಸಾವು ತಡೆಯುವಲ್ಲಿ ನಡಿಗೆ ಪ್ರಯೋಜನ; ವಾರದಲ್ಲಿ 8000 ಸ್ಟೆಪ್ಸ್ ನಡೆಯಿರಿ ಸಾಕು!