ಯಾದಗಿರಿ: ಬಿಸಿಲನಾಡು ಯಾದಗಿರಿ ಜನರಿಗೆ ಬಿಸಿಲಿನ ತಾಪದಿಂದ ಸನ್ ಸ್ಟ್ರೋಕ್ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹಬೀಬ್ ಹುಸೇನ್ ತಿಳಿಸಿದ್ದಾರೆ.
ಈ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ಬಿಸಿಲಿನಿಂದ ಬಳಲುತ್ತಿದ್ದಾರೆ. ಸುಮಾರು 43 ಡಿಗ್ರಿ ಸೆಲ್ಸಿಯಸ್ನಿಂದ ಹಿಡಿದು 45 ಡಿಗ್ರಿ ಸೆಲ್ಸಿಯಸವರಿಗೆ ಸೂರ್ಯ ಬಿಸಿ ಗಾಳಿ ಬೀರುತ್ತಾ ಕೆಂಡಾಮಂಡಲನಾಗಿದ್ದಾನೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರದಂತೆ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆ ನೈಸರ್ಗಿಕ ಸಂಪನ್ಮೂಲಗಳಿಂದ ಆವೃತವಾಗಿದ್ದರೂ ಕೂಡ ಕಲ್ಲಿನ ಬೆಟ್ಟ ಗುಡ್ಡದಿಂದ ಕೂಡಿದೆ. ಜನರು ಸಾಮನ್ಯವಾಗಿ ಬೆಟ್ಟ ಗುಡ್ಡಗಳಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ.
ಹೀಗಾಗಿ ಇಲ್ಲಿಯ ಜನರಿಗೆ ಬೀಸಿಲಿನ ತೀವ್ರತೆ ಹೆಚ್ಚಾಗಿ ಕ್ಯಾನ್ಸರ್, ಸನ್ ಸ್ಟ್ರೋಕ್ ಹಾಗೂ ಡಿಹೈಡ್ರಿಷನ್, ಜ್ವರ, ಚರ್ಮ ರೋಗ, ತಲೆ ನೋವು , ಅಲ್ಸರ್, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ವ್ಯಕ್ತಿಯು ಶಾರೀರಿಕವಾಗಿ ಕುಗ್ಗುತ್ತಿದ್ದಾನೆ.
ಬಿಸಿಲಿನ ತಾಪದಿಂದ ಪಾರಾಗಲು ಸಾರ್ವಜನಿಕರು ಛತ್ರಿಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಮುಂಜಾನೆ 9 ಗಂಟೆಯಿಂದ 12 ಗಂಟೆಯವರಿಗೆ ಸಾರ್ವಜನಿಕರುವ ಕೆಲಸ ಮಾಡಿ ತದನಂತ್ರ 12 ಗಂಟೆ ನಂತ್ರ ಹೊರಗಡೆ ಬರಬೇಡಿ ಎಂದು ಸಲಹೆ ನೀಡಿದ್ದಾರೆ. ಬಿಸಿಲನ ತೀವ್ರತೆಯನ್ನು ಕಡಿಮೆಗೊಳಿಸಲು ಸಾರ್ವಜನಿಕರು ಶಾರೀರಿಕವಾಗಿ ಬಿಳಿಯ ತೆಳ್ಳಗಿನ ಬಟ್ಟೆಯನ್ನು ಧರಿಸಿಕೊಳ್ಳಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ತಂಪು ಪಾನೀಯ ಹಾಗೂ ಜ್ಯೂಸನ್ನು ಸೇವಿಸಬೇಕು.
ಬಿಸಿಲಿನಿಂದ ಪಾರಾಗಲು ಬೇರೆ ಜಿಲ್ಲೆಗೆ ವಲಸೆ:
ಜಿಲ್ಲೆಯ ಕೆಲವು ಜನರು ಬಿಸಿಲಿನ ತಾಪದಿಂದ ಪಾರಾಗಲು ಬೇಸಿಗೆ ಕಾಲ ಮುಗಿಯುವರಿಗೂ ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದಾರೆ. ಬೇಸಿಗೆ ಮುಗಿದ ನಂತ್ರ ಜಿಲ್ಲೆಗೆ ಬರುವೆವು ಎಂದು ಹೇಳುತ್ತಾರೆ.
ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿ ಹೆಚ್ಚಳ
ಬಿಸಿಲಿನ ತೀವ್ರತೆಯನ್ನು ತಾಳಲಾರದೆ ಆಸ್ಪತ್ರೆಗಳಿಗೆ ಜನರು ಚಿಕಿತ್ಸೆಗೆಂದು ದಾಖಲಾಗುತ್ತಿದ್ದಾರೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಬೇಸಿಗೆಯ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಹೈಡ್ರೆಷನ್, ತಲೆ ನೋವು, ವಾಂತಿ ಭೇದಿ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ವೈದ್ಯರುಗಳಾದ ಆರತಿ ಅಗರವಾಲ್, ಶೈಲ್ ಬೀರಾದರ ತಿಳಿಸಿದ್ದಾರೆ.