ಯಾದಗಿರಿ: ಬಸವ ಸಾಗರ ಜಲಾಶಯದಿಂದ ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರು ಬೀಡುವಂತೆ ಸರ್ಕಾರ ಆದೇಶಿಸಿರುವುದನ್ನು ವಿರೋಧಿಸಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಮ್ಮ ತಾಲೂಕಿನ ಜನರಿಗೆ ಕುಡಿಯಲು ನೀರು ಸಿಗದೆ ಪರದಾಡುವ ಪರಿಸ್ಥಿತಿ ಉದ್ಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ ಬಸವ ಸಾಗರ ಜಲಾಶಯದಿಂದ ಬಳ್ಳಾರಿ ಜಿಲ್ಲೆಯ ಕುಡತಿನಿ ವಿದ್ಯುತ್ ಶಾಖೋತ್ಪನ್ನ ಕೇಂದ್ರಕ್ಕೆ ನೀರು ಹರಿಸುವಂತೆ ಸರಕಾರ ಆದೇಶ ಹೊರಡಿಸಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಭಾಗದಲ್ಲೇ ಜನ-ಜಾನುವಾರಗಳಿಗೆ ಕುಡಿಯಲು ನೀರು ಸಿಗದೆ ಜಾನುವಾರುಗಳು ಅಸುನೀಗುತ್ತಿವೆ. ಕೆರೆ ಕಾಲುವೆ, ಜಾಲಶಯಗಳು ಬತ್ತಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಮೋಸದಾಟವನ್ನು ಆಡಲು ಪ್ರಯತ್ನಿಸುತ್ತಿದೆ ಎಂದು ವ್ಯಂಗವಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯವಿದೆ. ಅಲ್ಲಿಂದಲೆ ಪೈಪ್ಲೈನ್ ಮುಖಾಂತರ ಶಾಖೋತ್ಪನ್ನ ಕೇಂದ್ರಕ್ಕೆ ನೀರು ಬೀಡಬಹುದು. ರಾಜಕೀಯ ಕುತಂತ್ರಿಗಳಿಂದ ನಮ್ಮ ಜಲಾಶಯದ ನೀರನ್ನು ಆಡಳಿತ ಸರಕಾರ ಬಳ್ಳಾರಿಗೆ ನೀರು ಹರಿಸುವಂತೆ ಆದೇಶಿಸಿದೆ. ನಮ್ಮ ಪ್ರಾಣ ಹೋದರೂ ನಾವು ನೀರು ಬೀಡುವುದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ವೆಂಕೋಬ ದೋರೆ ಆಗ್ರಹಿಸಿದರು.