ಯಾದಗಿರಿ/ ಸುರಪುರ: ನಗರದಲ್ಲಿ ವಾಸವಾಗಿರುವ ಜೋಗಾರ್ ಸಮುದಾಯದ ಜನಕ್ಕೆ ಕೊರೊನಾ ಬಿಸಿ ತಟ್ಟಿದ್ದು, ತಿನ್ನಲು ಅನ್ನವಿಲ್ಲದೇ ಕಣ್ಣೀರು ಸುರಿಸುತ್ತಿದ್ದಾರೆ.
ತಾಲೂಕಿನಲ್ಲಿ ನಡೆಯುವ ಜಾತ್ರೆ, ಸಂತೆ ಮತ್ತು ಗ್ರಾಮಗಳಲ್ಲಿ ಹೋಗಿ ಸೂಜಿ, ಪಿನ್ನು, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಬುಟ್ಟಿಯಲ್ಲಿ ಹೊತ್ತು ಮನೆ ಮನೆಗೆ ತೆರಳಿ ಮಾರಾಟ ಮಾಡಿ ಜೀವನ ನಡೆಸುವ ಜೋಗಾರ್ ಕುಟುಂಬಗಳು ಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ಸಿಕ್ಕು ಕಣ್ಣೀರು ಹರಿಸುವಂತಾಗಿದೆ. ನಗರದ ಕುಂಬಾರಪೇಟೆಯ ಬೀದರ್,ಬೆಂಗಳೂರು ಮುಖ್ಯ ಹೆದ್ದಾರಿಯ ಪಕ್ಕದಲ್ಲಿ ಚಿಕ್ಕ-ಚಿಕ್ಕ ತಗಡಿನ ಗುಡಿಸಲುಗಳು ಹಾಕಿಕೊಂಡು ಇವರು ಜೀವನ ನಡೆಸುತ್ತಿದ್ದಾರೆ. ಕೈಯಲ್ಲಿ ಕಾಸು ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ .
ಐದು ಮನೆಗಳಲ್ಲಿ ಒಟ್ಟು 40 ಜನ ಸದಸ್ಯರಿದ್ದು, ಇವರಲ್ಲಿ ಎರಡು ಕುಟುಂಬಗಳಲ್ಲಿ ಮಾತ್ರ ಪಡಿತರ ಚೀಟಿ ಇದೆ.ಆ ಎರಡು ಚೀಟಿಗೆ ಎರಡು ತಿಂಗಳ ಪಡಿತರ ಎಂದು ಕೇವಲ 40 ಕೆ.ಜಿ ಅಕ್ಕಿ,ಗೋದಿ ನೀಡಲಾಗಿದೆ. ಆ ಪಡಿತರ ಧಾನ್ಯಗಳು ಕೇವಲ 20 ದಿನಕ್ಕೆ ಖಾಲಿಯಾಗಿದ್ದು, ಈಗ ಊಟವಿಲ್ಲದೇ ಯಾರಾದರೂ ಊಟ ತಂದು ಕೊಡುವರೇ ಎಂದು ಎದುರು ನೋಡುವಂತಾಗಿದೆ. ಪಡಿತರ ಚೀಟಿ ಇಲ್ಲದವರಿಗೆ ಪಡಿತರ ಸಾಮಗ್ರಿ ನೀಡದೇ ತಾಲೂಕು ಆಡಳಿತ ತೊಂದರೆ ನೀಡಿದೆ. ಊಟಕ್ಕೂ ಗತಿಯಿಲ್ಲದ ಸಂಗತಿಯ ಕುರಿತು ಕುಟುಂಬದ ಹಿರಿಯ ಜೀವ ಮಹಾದೇವಿ ಹಾಗೂ ಅಂಬಾಜಿ ಎನ್ನುವವರು ತಮ್ಮ ಕಷ್ಟದ ಕುರಿತು ಹೇಳುವಾಗ ಕಣ್ಣೀರು ಸುರಿಸುವುದು ಎಲ್ಲರ ಮನಕಲುಕುವಂತಿದೆ.