ಯಾದಗಿರಿ: ವಿಧಾನ ಪರಿಷತ್ ಅಧಿವೇಶನದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ನಿಂದ ಸಂವಿಧಾನ ಹತ್ಯೆಯಾಗಿದೆ, ಸಂವಿಧಾನದಲ್ಲಿದ್ದ ಅವಿಶ್ವಾಸ ಮಂಡನೆಯ ಹಕ್ಕನ್ನು ಬಿಜೆಪಿ ಸದಸ್ಯರು ಕೇಳಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರು ಬಾಗಿಲಿಗೆ ಒದ್ದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರ ಗಲಾಟೆಯಿಂದ ತುಂಬಾ ನೋವಾಗಿದ್ದು, ಮೇಲ್ಮನೆ ನಮಗೆ ದೇವರ ಮಂದಿರದ ಸಮಾನ. ರಾಜ್ಯದಲ್ಲಿ ಕಾಂಗ್ರೆಸ್ಗೆ ಜನ ಬೆಂಬಲವಿಲ್ಲದಿರುವುದಕ್ಕೆ ಕಾಂಗ್ರೆಸ್ನವರು ಹತಾಶೆಗೊಂಡು ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಬುದ್ಧಿ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಗೋಮಾತೆಯನ್ನು ಪೂಜೆ ಮಾಡುತ್ತೇವೆ. ಆದ್ರೆ ಗೋ ಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ನವರು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಎಷ್ಟೇ ಅಡ್ಡಿಪಡಿಸಿದ್ರೂ ಕೂಡ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಇನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗೋ ಹತ್ಯೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ನನಗೆ ತಂದೆಯ ಸಮಾನ, ಯಾಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ದೇಶದ 19 ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಇದೆ. ನಮ್ಮ ರಾಜ್ಯದಲ್ಲಿ ಯಾಕೆ ಜಾರಿಯಾಗಬಾರದು ಎಂದು ಪ್ರಶ್ನೆ ಮಾಡಿದರು.