ಸುರಪುರ (ಯಾದಗಿರಿ): ನಗರದ ಕುಂಬಾರಪೇಟೆಯ ಪ್ರೇರಣಾ ಶಾಲಾ ಆವರಣದಲ್ಲಿ ಹೋಮ್ ಕ್ವಾರಂಟೈನ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಶಾಸಕ ರಾಜುಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮ ರಾವ್, ನಮ್ಮ ಹೋರಾಟ ಕೊರೊನಾ ಸೋಂಕಿನ ವಿರುದ್ಧವಿದೆ ವಿನಃ ಕೊರೊನಾ ಸೋಂಕಿತರ ವಿರುದ್ಧ ಅಲ್ಲ ಎಂದು ತಿಳಿಸಿದರು.
ನಗರದ ಕುಂಬಾರಪೇಟೆ ಪ್ರೇರಣ ಶಾಲಾ ಆವರಣದಲ್ಲಿ ನಡೆದ ಕ್ವಾರಂಟೈನ್ ವಾಚ್ ಕುರಿತು ಮಾಹಿತಿ ಸಭೆಯಲ್ಲಿ ಮಾತನಾಡಿ, ಇಲ್ಲಿಯವರೆಗೆ ಜಿಲ್ಲೆಯಲ್ಲಿ 224 ದಿಗ್ಬಂಧನ ಕೇಂದ್ರಗಳನ್ನು ತೆರೆದು ಹೊರ ರಾಜ್ಯಗಳಿಂದ ಬಂದ 15,000 ಜನರನ್ನು ಉಳಿಸಿಕೊಳ್ಳಲಾಗಿತ್ತು ಈಗ ಎಲ್ಲರನ್ನು ಬಿಡುಗಡೆಗೊಳಿಸಿ ಮನೆಯಲ್ಲಿ ಕ್ವಾರಂಟೈನ್ ನಿಯಮ ಜಾರಿ ಮಾಡಲಾಗಿದೆ.
ಶಾಸಕ ರಾಜುಗೌಡ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಇದುವರೆಗೆ ಹೊರಗಿನಿಂದ ಬಂದವರಲ್ಲಿ ಸೋಂಕು ಕಾಣಿಸಿದೆ. ಜಿಲ್ಲೆಯವರಲ್ಲಿ ಯಾವುದೇ ಸೋಂಕು ಬರದಂತೆ ತಡೆಯುವಲ್ಲಿ ಜಿಲ್ಲಾಧಿಕಾರಿ, ಅಧೀಕ್ಷಕರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎರಡು ತಾಲೂಕಿನ ತಹಶೀಲ್ದಾರರ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಮಾತನಾಡಿ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೊರೊನಾ ಸೋಂಕು ತಡೆಯುವಲ್ಲಿ ವಹಿಸಿದ ಶ್ರಮವನ್ನು ಶ್ಲಾಘಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರುಶಿಕೇಶ ಭಗವಾನ್ ಸೋನವಾಣೆ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ ಸ್ಥಾವರಮಠ, ಮರಿಲಿಂಗಪ್ಪ ಕರ್ನಾಳ ಮುಖಂಡರಾದ ದೊಡ್ಡ ದೇಸಾಯಿ , ಭೀಮಣ್ಣ ಬೇವಿನಾಳ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್, ಹುಣಸಗಿ ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಹಾಗೂ ಇತರೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.