ಯಾದಗಿರಿ : ಕೊರೊನಾ ವೈರಸ್ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ವೀಕೆಂಡ್ ಕರ್ಪ್ಯೂ ಕೂಡ ಜಾರಿಗೊಳಿಸಿದೆ. ಆದ್ರೆ, ಸರ್ಕಾರದ ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಜನರಿಗೆ ಯಾದಗಿರಿಯಲ್ಲಿಂದು ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ನಗರದ ಸುಭಾಷ್ ವೃತ್ತ ಸೇರಿದಂತೆ ಹಲವೆಡೆ ಸರ್ಕಾರದ ನಿಯಮ ಪಾಲನೆ ಮಾಡದೆ ರಸ್ತೆಗಿಳಿದ ಜನರಿಗೆ ಲಾಠಿಚಾರ್ಜ್ ಮಾಡುವ ಮೂಲಕ ಬಿಸಿಲಿನಲ್ಲಿ ಬಿಸಿ ಬಿಸಿ ಲಾಠಿ ರುಚಿ ತೋರಿಸಿದ್ದಾರೆ. ಲಾಠಿ ಏಟಿಗೆ ಜನ ಸ್ಥಳದಿಂದ ಕಾಲ್ಕಿತ್ತು ಪರಾರಿಯಾದರು.
ಲಾಕ್‌ಡೌನ್ ಉಲ್ಲಂಘಿಸಿ ಅಂಗಡಿ- ಮುಂಗಟ್ಟುಗಳನ್ನ ತೆರೆದ ಮಾಲೀಕರಿಗೆ ಅಧಿಕಾರಿಗಳು ದಂಡ ಹಾಕುವ ಮೂಲಕ ಎಚ್ಚರಿಕೆ ನೀಡಿದರು. ಈ ವೇಳೆ ಕೆಲ ಅಂಗಡಿ ಮಾಲೀಕರು ದಂಡ ಕಟ್ಟಲು ಕೂಡ ಹಣವಿಲ್ಲವೆಂದು ತಮ್ಮ ಅಳಲನ್ನ ತೋಡಿಕೊಂಡರು.
ಬೆಳಗ್ಗೆಯಿಂದಲೇ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪಿಎಸ್ಐ ಸೌಮ್ಯ ರಾಣಿ ಸಿಟಿ ರೌಂಡ್ ಹಾಕುವ ಮೂಲಕ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಶಾಕ್ ನೀಡಿದರು. ವೀಕೆಂಡ್ ಕರ್ಪ್ಯೂ ನಿಯಮ ಪಾಲನೆ ಮಾಡದ ಅಂಗಡಿ-ಮುಂಗಟ್ಟುಗಳನ್ನ ಮುಚ್ಚಿಸಿದರು. ಅಂಗಡಿ ಮಾಲೀಕರಿಗೆ ದಂಡ ಕೂಡ ವಿಧಿಸಿದರು.