ಸುರಪುರ: ತಾಲೂಕಿನ ಕೆಂಭಾವಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಕೆಂಭಾವಿ ತಾಲೂಕು ಹೋರಾಟ ಸಮಿತಿಯ ವತಿಯಿಂದ ಒತ್ತಾಯಿಸಲಾಯಿತು.
ಕೆಂಭಾವಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ನಿಂಗನಗೌಡ ದೇಸಾಯಿ ಮಾತನಾಡಿ , ಕೆಂಭಾವಿಯನ್ನು ತಾಲೂಕು ಎಂದು ಘೋಷಿಸಬೇಕೆಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಸರ್ಕಾರಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದೆ ಎಂದರು.
ನಂತರ ಮಾತನಾಡಿ, ಕೆಂಭಾವಿಗಿಂತ ಚಿಕ್ಕ ಚಿಕ್ಕ ಊರುಗಳನ್ನು ಸರ್ಕಾರ ತಾಲೂಕು ಕೇಂದ್ರಗಳಾಗಿ ಘೋಷಿಸಿದೆ. ಆದರೆ ಸುಮಾರು 64 ಗ್ರಾಮಗಳನ್ನು ಹೊಂದಿರುವ, ಅಲ್ಲದೆ 90 ಸಾವಿರದ ವರೆಗೂ ಜನಸಂಖ್ಯೆಯನ್ನು ಹೊಂದಿರುವ ಕೆಂಭಾವಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸದೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಹೀಗಾಗಿ ಈಗ ಮತ್ತೊಮ್ಮೆ ಆಗ್ರಹಿಸುತ್ತಿದ್ದು, ಕೂಡಲೇ ಕೆಂಬಾವಿಯನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ನಿರಂತರವಾಗಿ ಹೋರಾಟ ನಡೆಸುವ ಜೊತೆಗೆ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದರು.
ಸಭೆಯಲ್ಲಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಬಸವಂತ್ರಾಯ ಚೌಧರಿ ಶರಣಬಸವ ಡಿಗ್ಗಾವಿ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ಶರಣಪ್ಪ ಪೂಜಾರಿ ಅಮ್ಮಣ್ಣ, ಧರಿ ಅದಮ್ ಖಾಜಿ ಚಾಂದಪಾಶ ಇತರರಿದ್ದರು.