ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಫೆ.25 ರಂದು ಸಂಭವಿಸಿದ ಸಿಲಿಂಡರ್ ಸ್ಫೋಟ ದುರಂತದಲ್ಲಿ 24-25 ಜನ ಗಾಯಗೊಂಡಿದ್ದರು. ಅದರಲ್ಲಿ ಚಿಕಿತ್ಸೆಗಾಗಿ ಕಲಬುರಗಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಗಾಯಾಳುಗಳ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರದವರೆಗೆ ಮೃತರ ಸಂಖ್ಯೆ 10ಕ್ಕೇರಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೋಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗಣ್ಣಗೌಡ ಗುರುಲಿಂಗಪ್ಪಗೌಡ ಲಕಶೆಟ್ಟಿ (55) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಭೀಕರ ದುರಂತದಲ್ಲಿ ಗಾಯಗೊಂಡ ಇನ್ನೂ ಕೆಲವರ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ. ಈ ಸಿಲಿಂಡರ್ ದುರಂತ ಜಿಲ್ಲೆಯಲ್ಲಿ ನಡೆದ ಅತಿದೊಡ್ಡ ದುರ್ಘಟನೆಯಾಗಿದೆ. ಇಡೀ ಗ್ರಾಮದ ತುಂಬಾ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: ರಷ್ಯಾ ಸೈನಿಕರ ತಾಯಂದಿರೇ ಕೀವ್‌ಗೆ ಬಂದು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ: ಉಕ್ರೇನ್
ಏರುತ್ತಿರುವ ಸಾವಿನ ಸಂಖ್ಯೆ ಇಲ್ಲಿಗೆ ಕೊನೆಯಾಗಲಿ, ಗಾಯಾಳುಗಳು ಗುಣಮುಖರಾಗಿ ಗ್ರಾಮಕ್ಕೆ ಮರಳಿ ಬರಲಿ ಎಂದು ದೇವರಲ್ಲಿ ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.
ಈವರೆಗೆ ಸಾವಿಗೀಡಾದವ ವಿವರ: ಆದ್ಯ (3), ನಿಂಗಮ್ಮ (89), ಮಹಾಂತೇಶ್ (2), ಗಂಗಮ್ಮ (55), ಸ್ವಾತಿ (6), ಭೀಮರಾಯ (78), ವೀರಬಸಪ್ಪ (25), ಕಲ್ಲಪ್ಪ (48), ಚನ್ನವೀರ್ (30), ಚನ್ನಪ್ಪ (50), ಸಂಗನಗೌಡ ಲಕಶೆಟ್ಟಿ (55).
ಘಟನೆ ಸಂಬಂಧ ಶಹಾಪುರದ ವಿಜಯ್ ಗ್ಯಾಸ್ ಏಜೆನ್ಸಿಯ ಮಾಲೀಕ ಮತ್ತು ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ಶಹಾಪುರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2022 ಕಲo.285, 337, 338, 304 A IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ವೇದಮೂರ್ತಿ ಮಾಹಿತಿ ನೀಡಿದ್ದಾರೆ.