ಯಾದಗಿರಿ: ಬಿಜೆಪಿ ಸರ್ಕಾರವು ಜಾಹೀರಾತುಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಬಿಂಬಿಸುತ್ತಿದೆ. ಜಾಹೀರಾತುಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಹಾಗೂ ರಾಜ್ಯದ ಅಭಿವೃದ್ಧಿ ಕಡೆಗೆ ಗಮನಹರಿಸಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಜಿಲ್ಲೆಯ ಗುರುಮಠಕಲ್ ಪಟ್ಟಣದ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬ ಇಲಾಖೆ ಅಧಿಕಾರಿ ಮತ್ತು ಶಾಸಕರು ಮಾಡಬೇಕಾಗಿದ್ದ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ರಾಜ್ಯದ ಚುನಾವಣೆ ಹಿನ್ನೆಲೆ ಅಮಿತ್ ಶಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಉದ್ಘಾಟಿಸುತ್ತಿರುವುದು ಚುನಾವಣೆ ಪ್ರಚಾರದ ಹೊಸ ದಾರಿಗೆ ನಾಂದಿ ಹಾಡಿದಂತಿದೆ ಎಂದು ಕಿಡಿಕಾರಿದರು.
ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಎಂದು ಜಂಭ ಕೊಚ್ಚಿಕೊಳ್ಳುತ್ತಿದೆ. ಆದರೆ ಅಭಿವೃದ್ಧಿ ಕಡೆಗಣಿಸಿರುವ ಸ್ಥಳೀಯ ನಾಯಕರ ಮೇಲೆ ಭರವಸೆ ಇಲ್ಲದ ಕಾರಣ ಪ್ರತಿಯೊಂದು ಕಾಮಗಾರಿ ಅಪೂರ್ಣವಾಗಿದ್ದರೂ, ಉದ್ಘಾಟನೆಗೆ ಕೇಂದ್ರದಿಂದ ಸಚಿವರು ಮತ್ತು ಪ್ರಧಾನಿಗಳು ಬರುತ್ತಿರುವುದು ಬಿಜೆಪಿ ಹತಾಶೆಗೆ ಒಳಗಾಗಿದೆ ಎಂದು ಲೇವಡಿ ಮಾಡಿದರು.
ಖರ್ಗೆ ಸೋಲಿಸುತ್ತೇನೆಂದ ಚಿಂಚನಸೂರ್ಗೆ ಕೆಂಪುಹಾಸಿಗೆ: ಬಾಬುರಾವ್ ಚಿಂಚನಸೂರ್ ತೊಡೆ ತಟ್ಟಿ ಖರ್ಗೆ ಅವರನ್ನು ಸೋಲಿಸುತ್ತೇನೆ ಎನ್ನುತ್ತಿದ್ದವರಿಗೆ ಕೆಂಪುಹಾಸಿಗೆ ಹಾಕಿರುವುದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊರತೆ ಇರುವುದು ಎದ್ದು ಕಾಣುತ್ತಿದೆ. ನಮ್ಮ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಾಬುರಾವ್ ಚಿಂಚನಸೂರ್ ತಮ್ಮ ಕೋಲಿ ಜಾತಿಯನ್ನು ಎಸ್ಟಿಗೆ ಸೇರಿಸುತ್ತೇನೆ ಎಂದು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಎಲ್ಲ ಅಧಿಕಾರ ಅನುಭವಿಸಿದರೂ ಅವರು ಏನು ಮಾಡಿದರು? ಮುಂದೆ ಅವರ ಜಾತಿ ಸಮಾಜಕ್ಕೆ ಏನು ಉತ್ತರಿಸುತ್ತಾರೆ? ಅವರಿಗೆ ಯಾವ ರೀತಿ ತಕ್ಕ ಪಾಠ ಕಲಿಸುತ್ತಾರೆ ಎಂಬುದು ಕ್ಷೇತ್ರದ ಜನರು ಚುನಾವಣೆ ಯಲ್ಲಿ ತೋರಿಸುತ್ತಾರೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಕಾಂಗ್ರೆಸ್ ಚುನಾವಣೆ ಮುಂಚೆ ಆಪರೇಷನ್ ಹಸ್ತ ಮಾಡುತ್ತಿದೆ. ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಕಮಲ ಆಪರೇಷನ್ ಮಾಡುತ್ತಾ ಬಂದಿದೆ ಎಂದು ಕುಮಾರಸ್ವಾಮಿ ಅವರು ರಾಷ್ಟ್ರೀಯ ಪಕ್ಷಗಳ ಕುರಿತು ವ್ಯಂಗ್ಯವಾಗಿ ಕುಟುಕಿದರು.
ದೇವರ ಮೊರೆ ಹೋದ ಕುಮಾರಸ್ವಾಮಿ: ಕಲ್ಯಾಣ ಕರ್ನಾಟಕ ಭಾಗದ ವಿವಿಧ ದೇವಸ್ಥಾನಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬೆಳಗ್ಗೆಯಿಂದ ಟೆಂಪಲ್ ರನ್ ನಡೆಸಿದರು. ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರಿಗೆ ಭಂಡಾರ, ಅಲಂಕಾರ, ರುದ್ರಾಭೀಷಕ ಪೂಜೆ ಸಲ್ಲಿಸಿ ಹೆಚ್ಡಿಕೆ ಆಶೀರ್ವಾದ ಪಡೆದರು. ನಂತರ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಾತಾ ಮಾಣೀಕೇಶ್ವರಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೀದರ್ ಶಾಸಕ ಬಂಡೆಪ್ಪ ಕಾಶಂಪೂರ್, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣಗೌಡ ಕಂದಕೂರ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ್ ನಿರಿಟಿ, ಹಿರಿಯ ಮುಖಂಡರಾದ ಜಿ.ತಮ್ಮಣ್ಣ ಇದ್ದರು.
ಇದನ್ನೂಓದಿ:ಬಿಜೆಪಿ ಪಕ್ಷ ಪಾಕಿಸ್ತಾನದಲ್ಲಿದ್ದೆಯಾ?... ಸ್ವಾಭಿಮಾನಿ ಪದ ಬಳಸಬೇಡಿ ಎಂದ ರವೀಂದ್ರ ವಿರುದ್ಧ ಸುಮಲತಾ ಕಿಡಿ