ಯಾದಗಿರಿ : ಫೆ.25 ರಂದು ನಡೆದ ಸಿಲಿಂಡರ್ ದುರಂತದಲ್ಲಿ 24 ಜನ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಕಲಬುರಗಿಯ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 13ಕ್ಕೆ ತಲುಪಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪೈಕಿ ಮಹಾರಾಷ್ಟ್ರದ ಸೋಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಮಂಗಲ ಹಳ್ಳದ (50) ಹಾಗೂ ಹನುಮಂತರಾಯ ಇಜೇರಿ (50) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ.
ಮೃತ ಕುಟುಂಬಸ್ಥರಿಗೆ ಸವದಿ, ಸಚಿವ ಬೈರತಿ ಬಸವರಾಜ ಸಾಂತ್ವನ: ಇಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಭೇಟಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಸಚಿವ ಬೈರತಿ ಬಸವರಾಜ ಅವರು, ದೋರನಹಳ್ಳಿ ಸಿಲಿಂಡರ್ ದುರಂತ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಮೃತರ ಕುಟುಂಬ ಸದಸ್ಯರಿಗೆ ಬಿಜೆಪಿಯಿಂದ ತಲಾ 1 ಲಕ್ಷ ರೂ. ಗಳ ಧನ ಸಹಾಯ ನೀಡಲಾಗುವುದು. ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರದ ಹಣ ನೀಡಲಾಗುತ್ತದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಐದು ಲಕ್ಷ ರೂ. ನೀಡುವ ಬಗ್ಗೆ ಚೆಕ್ ಕ್ಲಿಯರ್ ಮಾಡಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಬಳಿಕ ಸುರಪುರ ಶಾಸಕ ರಾಜೂಗೌಡ ಮಾತನಾಡಿ, ದೊರನಹಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ ಬಗ್ಗೆ ಕಳವಳ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ 25 ಸಾವಿರ ರೂ. ನೀಡುವುದಾಗಿ ಹೇಳಿದರು.
ಇದನ್ನೂ ಓದಿ: ಯಾದಗಿರಿ ಸಿಲಿಂಡರ್ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 11ಕ್ಕೆ ಏರಿಕೆ