ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಹಡಲಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಎರಡು ಅಂಗನವಾಡಿ ಕೇಂದ್ರಗಳನ್ನು ಕಿಂಡರ್ ಗಾರ್ಟನ್ ಮಾದರಿಯಲ್ಲಿ ಮಾಡಬೇಕು. ಕಾನ್ವೆಂಟ್ ಮಕ್ಕಳಂತೆ ಹಳ್ಳಿ ಮಕ್ಕಳು ಕಲಿಯಬೇಕು ಎಂಬ ಸದುದ್ದೇಶದಿಂದ ಹಡಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶೋಭಾ ಮುದಗಲ್ ಹಗಲಿರುಳು ಶ್ರಮಿಸುತ್ತಿದ್ದಾರೆ.
ಹಡಲಗೇರಿ ಗ್ರಾಮದಲ್ಲಿರುವ ಎರಡು ಅಂಗನವಾಡಿ ಗೋಡೆಗಳ ಮೇಲೆ ಮಕ್ಕಳಿಗೆ ಇಷ್ಟವಾಗುವ ಬಣ್ಣ - ಬಣ್ಣದ ಚಿತ್ರಗಳನ್ನು ಬರೆಯಿಸಿದ್ದಾರೆ. ಜೊತೆಗೆ ಮಕ್ಕಳಿಗೆ ಕೂರಲು ಕುರ್ಚಿ ಹಾಗೂ ಮೇಜುಗಳನ್ನು ತರಿಸಿದ್ದಾರೆ. ಕೊರೊನಾ ವೈರಸ್ನಿಂದಾಗಿ ಸದ್ಯ ಮಕ್ಕಳ ಮನೆಗೆ ಆಹಾರ ಧಾನ್ಯ ಕಳುಹಿಸಲಾಗುತ್ತಿದ್ದು, ಅಂಗನವಾಡಿಗಳು ಆರಂಭಗೊಳ್ಳುತ್ತಲೇ ವಿಶೇಷ ಅಲಂಕಾರದೊಂದಿಗೆ ಮಕ್ಕಳನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ.
ಡಸ್ಟ್ಬಿನ್ ವಿತರಣೆಗೆ ಸಿದ್ಧತೆ: ಇನ್ನು, ಹಡಲಗೇರಿ ಗ್ರಾ.ಪಂ.ಮಟ್ಟದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ವಿತರಿಸಲು ಒಟ್ಟು 600 ಕಸದ ಡಬ್ಬಗಳನ್ನು ಖರೀದಿಸಲಾಗಿದೆ. ಇವುಗಳನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಜಿ.ಪಂ.ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾ.ಪಂ. ಇಒ ಶಶಿಕಾಂತ ಶಿವಪೂರೆ, ಜಿ.ಪಂ.ಸದಸ್ಯೆ ಪ್ರೇಮಾಬಾಯಿ ಚವ್ಹಾಣ ಅವರ ನೇತೃತ್ವದಲ್ಲಿ ಶೀಘ್ರವೇ ವಿತರಿಸಲಾಗುವುದು ಎಂದು ಪಿಡಿಒ ಶೋಭಾ ಮುದಗಲ್ ತಿಳಿಸಿದ್ದಾರೆ.