ವಿಜಯಪುರ: ಬೆಂಗಳೂರಿನಲ್ಲಿ ಚಿಲುಮೆ ಎನ್ನುವ ಎನ್ಜಿಒ ಮಾಡಿದೆ ಎನ್ನಲಾದ ವೋಟರ್ ಐಡಿ ದತ್ತಾಂಶ ಸಂಗ್ರಹ ಪ್ರಕರಣ ಗುಮ್ಮಟನಗರಿ ವಿಜಯಪುರಕ್ಕೂ ಹಬ್ಬಿದೆ. ನಗರ ಶಾಸಕರು ತಮ್ಮ ಖಾಸಗಿ ಬ್ಯಾಂಕ್ ಸಿಬ್ಬಂದಿಗಳಿಂದ ಕೆಲವು ವೋಟರ್ ಐಟಿಯ ದತ್ತಾಂಶ ಸಂಗ್ರಹಿಸಿ ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರಿಪ್ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕರ ಕಡೆಯವರು ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ, ಯಾರು ಕಾಂಗ್ರೆಸ್ಗೆ ವೋಟ್ ಮಾಡುತ್ತೇವೆ ಎಂದು ಹೇಳುತ್ತಾರೋ ಅಂತಹವರ ವೋಟರ್ ಐಡಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ರೀತಿ ಮನೆ ಮನೆ ಹೋಗುವವರನ್ನು ಹಿಡಿಯಲು ಹೋದಾಗ ಇಬ್ಬರು ಓಡಿ ಹೋಗಿದ್ದು, ಓರ್ವ ಸಿಕ್ಕಿ ಹಾಕಿಕೊಂಡಿದ್ದನು. ನಂತರ ನಗರ ಶಾಸಕರ ಪಿಎ ಫೋನ್ ಮಾಡಿ ಅವರನ್ನು ಬಿಡಿ ಎಂದು ಮನವಿ ಮಾಡಿ ಬಿಡಿಸಿಕೊಂಡು ಹೋಗಿದ್ದಾರೆ. ಅವರ ಬಳಿ ಇದ್ದ ವೋಟರ್ ಐಡಿಗಳನ್ನು ತಹಸೀಲ್ದಾರ್ಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಇದೆ ರೀತಿ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿಲುಮೆ ಕೇಸ್: ಮತ್ತೋರ್ವ ಆರೋಪಿ ಬಂಧನ.. ಬಂಧಿತರ ಸಂಖ್ಯೆ 12ಕ್ಕೆ ಏರಿಕೆ