ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಭೀಮಾ ನದಿ ಭಾಗದಲ್ಲಿ ಗಾಂಜಾ, ಮಾವಾ ಮಾರಾಟ ಮಾಡಲಾಗುತ್ತಿದೆ ಎನ್ನುವ ನಾಗಠಾಣ ಶಾಸಕರ ಗಂಭೀರ ಆರೋಪದ ಬೆನ್ನಲ್ಲೇ ಜಿಲ್ಲೆಯ ಪೊಲೀಸರು, ಅಬಕಾರಿ ಇಲಾಖೆ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದ್ದಾರೆ.
ಒಂದೇ ವಾರದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಲ್ಲಿಯವರೆಗೆ ಲಕ್ಷಾಂತರ ರೂ. ಬೆಲೆ ಬಾಳುವ 244 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಹೊಲ, ತೋಟದಲ್ಲಿ ಗಾಂಜಾ ಬೆಳೆಯುತ್ತಿರುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ.
ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಜಾಲ ವ್ಯಾಪಕವಾಗಿ ಹರಡಿ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮತ್ತು ಬೆಳೆಯುವವರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನಾಲ್ಕು ಪ್ರಕರಣ ಭೇದಿಸಲಾಗಿದೆ.
ನಿಡಗುಂದಿ, ವಿಜಯಪುರ ಹಾಗೂ ಸಿಂದಗಿ ತಾಲೂಕಿನಲ್ಲಿ ಜಿಲ್ಲಾ ಪೊಲೀಸರು ಹಾಗೂ ಕಾಖಂಡಕಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಪ್ರತ್ಯೇಕವಾಗಿ ದಾಳಿ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಹೊಲದಲ್ಲಿ ಬೆಳೆದಿದ್ದ 49 ಕೆಜಿ ಗಾಂಜಾ ವಶಪಡಿಸಿಕೊಂಡು ತಂದೆ-ಮಗನನ್ನು ಬಂಧಿಸಲಾಗಿದೆ.
ಅಬಕಾರಿ ಇಲಾಖೆ ಕಾಖಂಡಕಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 130 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದೆ. ಈ ಪ್ರಕರಣದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇದೇ ಗ್ರಾಮದಲ್ಲಿ ಇನ್ನೂ ಹಲವು ಗದ್ದೆ, ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಶಂಕೆ ಹಿನ್ನೆಲೆಯಲ್ಲಿ ಅಬಕಾರಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಡ್ರೋನ್ ಬಳಕೆ:
ಜಿಲ್ಲಾ ಪೊಲೀಸ್ ಇಲಾಖೆ ಸಹ ಗಾಂಜಾ ಮಾರಾಟಗಾರರು, ಬೆಳೆಯುವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಮೊನ್ನೆ ನಿಡಗುಂದಿ ಹೊಲದಲ್ಲಿ 60 ಕೆಜಿ ಹಾಗೂ ವಿಜಯಪುರ ನಗರದ ಜಮಖಂಡಿ ನಾಕಾ ರಸ್ತೆಯ ಹೊಲದಲ್ಲಿ 5 ಕೆಜಿ ಗಾಂಜಾ ವಶಪಡಿಸಿಕೊಂಡು ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಹೊಲ, ಗದ್ದೆಯ ಮಧ್ಯದಲ್ಲಿ ಗಾಂಜಾ ಬೆಳೆಯುವ ಕಾರಣ ಪತ್ತೆ ಹಚ್ಚುವುದು ಕಷ್ಟವಾಗಿದೆ. ಅದಕ್ಕಾಗಿ ಜಿಲ್ಲಾ ಪೊಲೀಸರು ಡ್ರೋನ್ ಕ್ಯಾಮರಾ ಬಳಸಿ ಗಾಂಜಾ ಪತ್ತೆ ಹಚ್ಚಲು ಚಿಂತನೆ ನಡೆಸಿದ್ದಾರೆ.