ವಿಜಯಪುರ: ಮಹಿಳೆಯನ್ನು ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದರೆಂದು ಲಂಬಾಣಿ ಸಮುದಾಯದ ಮುಖಂಡರು ಅವಳಿ ಸಹೋದರರಿಬ್ಬರ ತಲೆಕೂದಲು ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಿಜಯಪುರ ತಾಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದಲ್ಲಿ ಘಟನೆ ನಡೆದಿದ್ದು, ವಿಡಿಯೋಗಳು ವೈರಲ್ ಆಗಿವೆ.
ತಾಂಡಾದ ಸಹೋದರರಿಗೆ ಸಮುದಾಯವ ಮುಖಂಡರು ಈ ರೀತಿಯ ಶಿಕ್ಷೆ ನೀಡಿದ್ದಾರೆಂದು ತಿಳಿದುಬಂದಿದೆ. ಸಹೋದರರು ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದರು. ಅಲ್ಲಿಗೆ ಮಹಿಳೆಯೂ ಸಹ ಕುಟುಂಬಸಮೇತ ದುಡಿಯಲು ಹೋಗಿದ್ದಳು. ಈ ಸಂದರ್ಭದಲ್ಲಿ ಯುವಕರು ಆಕೆಯನ್ನು ಚುಡಾಯಿಸಿ, ಅಸಭ್ಯ ವರ್ತನೆ ತೋರಿದ್ದಾರೆ. ಈ ವಿಚಾರ ತಿಳಿದ ಸಮುದಾಯದ ಮುಖಂಡರು, ಯುವಕರನ್ನು ಗ್ರಾಮಕ್ಕೆ ಕರೆಯಿಸಿದ್ದಾರೆ ಎನ್ನಲಾಗಿದೆ.
ಲಂಬಾಣಿ ಸಮುದಾಯದಲ್ಲಿ ಕೆಲವು ಕಟ್ಟುಪಾಡುಗಳಿವೆ. ಹಿರಿಯರು ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮಹಿಳೆಯನ್ನು ಚುಡಾಯಿಸಿ ತಮ್ಮ ಸಮುದಾಯದ ಕಟ್ಟುಪಾಡು ಮೀರಿದ್ದಾರೆ ಎಂದು ಲಂಬಾಣಿ ಸಮುದಾಯದ ಹಿರಿಯರು ಪಂಚಾಯಿತಿ ಸೇರಿಸಿದ್ದಾರೆ. ಅಲ್ಲಿ ಈ ಇಬ್ಬರು ಯುವಕರ ತಲೆ ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಹೆಗಡಿಹಾಳ ತಾಂಡಾದಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಪೊಲೀಸರು ಗ್ರಾಮಕ್ಕೆ ತೆರಳಿ, ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಕೆಕೆಆರ್ಟಿಸಿ ನೇಮಕಾತಿ: ತೂಕ ಹೆಚ್ಚಳಕ್ಕೆ ಕಬ್ಬಿಣದ ಕಲ್ಲು ಇಟ್ಟುಕೊಂಡು ಸಿಕ್ಕಿಬಿದ್ದ ಚಾಲಾಕಿಗಳು