ವಿಜಯಪುರ: ನಗರದ ಹೊರಭಾಗದ ಲೊಯೊಲಾ ಪಿಯು ಕಾಲೇಜಿನ ಹಾಸ್ಟೆಲ್ ಹಿಂಬದಿ ಬಾವಿಯಲ್ಲಿ ವಿದ್ಯಾರ್ಥಿವೋರ್ವ ಶವವಾಗಿ ಪತ್ತೆಯಾಗಿದ್ದಾನೆ.
ಮೃತನನ್ನು ಇದೇ ಹಾಸ್ಟೆಲ್ನ ಪಿಯು ವಿದ್ಯಾರ್ಥಿ ಶ್ರೀಕಾಂತ ದಯಾನಂದ ನಾಲವಾರ (17) ಎಂದು ಗುರುತಿಸಲಾಗಿದೆ. ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಶ್ರೀಕಾಂತ, ಲೊಯೊಲಾ ಪಿಯು ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಶ್ರೀಕಾಂತನ ಕುತ್ತಿಗೆ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಹೀಗಾಗಿ ಇದು ಕೊಲೆ ಎಂದು ಆತನ ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಬಾಲಕನ ಶವದ ಮರಣೋತ್ತರ ಪರೀಕ್ಷೆ ನಡೆಸಲು ಅಡ್ಡಿಪಡಿಸಿದ ಪೋಷಕರು, ಲೊಯೊಲಾ ಕಾಲೇಜು ಪ್ರಾಂಶುಪಾಲ ಹಾಗೂ ಹಾಸ್ಟೆಲ್ ವಾರ್ಡನ್ನನ್ನು ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಂತರ ಬಾಲಕನ ಶವದ ಮೆರವಣಿಗೆ ನಡೆಸಲು ಮುಂದಾದಾಗ ಅದನ್ನು ತಡೆಯಲು ಪೊಲೀಸರು ಯತ್ನಿಸಿದಾಗ ತಳ್ಳಾಟ-ನೂಕಾಟ ಉಂಟಾಯಿತು.
![Boy death](https://etvbharatimages.akamaized.net/etvbharat/prod-images/kn-vjp-03-boy-death-av-7202140_09082019143726_0908f_1565341646_167.jpg)
ಬಳಿಕ ಜಿಲ್ಲಾಸ್ಪತ್ರೆಯಿಂದ ಬಾಲಕನ ಶವ ಹೊರ ತಂದ ಪೋಷಕರು ಅಥಣಿ-ವಿಜಯಪುರ ರಸ್ತೆಯಲ್ಲಿ ಮೃತದೇಹವಿಟ್ಟು, ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಲೊಯೊಲಾ ಸಂಸ್ಥೆಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ತಪ್ಪಿತಸ್ಥರ ಬಂಧನಕ್ಕೆ ಒತ್ತಾಯಿಸಿದರು. ಇನ್ನು ಈ ಸಂಬಂಧ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.