ವಿಜಯಪುರ: ತಮ್ಮ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು. ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಾರೋ ಆರೋಪ ಮಾಡುತ್ತಾರೆಂದರೆ ಅದು ನಿಜವಾಗುತ್ತಾ ಎಂದು ಪ್ರಶ್ನಿಸಿದರು.
ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದು ಯಾರು?. ಸವದಿ, ಶ್ರೀರಾಮುಲು ಇಲ್ಲವೇ ಸಿಎಂ ಬೊಮ್ಮಾಯಿ ಹಾಗೂ ಬಿಎಸ್‌ವೈ. ಇವರು ತಾವು ಹಣ ಕೊಟ್ಟಿರುವುದಾಗಿ ಆರೋಪ ಮಾಡಬೇಕಾಗಿತ್ತು. ಆದರೆ ಅವರು ಇದಕ್ಕೆ ಯಾವುದೇ ಉತ್ತರ ನೀಡಿಲ್ಲ. ನಾನು ಆತ್ಮಸಾಕ್ಷಿಯಾಗಿ ಜೀವಿಸಿದವನು. ನನ್ನ ಕೈ, ಬಾಯಿ ಶುದ್ಧವಾಗಿದೆ ಎಂದರು.
ಕೆಲವರು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ, ಅವರು ಮಾಡಲಿ, ಇದು ಪ್ರಜಾಪ್ರಭುತ್ವ ದೇಶ. ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ಕಾರ್ಯಕ್ರಮ ನಡೆಯುವ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ವೇದಿಕೆ ಏರುತ್ತಿದ್ದಂತೆ ಕೆಲ ರೈತ ಹೋರಾಟಗಾರರು ಅವರ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಕೊಮ್ಮಘಟ್ಟದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಮೋದಿ