ವಿಜಯಪುರ: ಕಳೆದ ಒಂದು ವಾರದಿಂದ ಬಿಸಿಲಿನ ತಾಪಮಾನಕ್ಕೆ ಬೇಸತ್ತಿದ್ದ ಗುಮ್ಮಟನಗರಿಯ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
ಸಂಜೆ 5 ಗಂಟೆಯಿಂದ ಸ್ಟೇಷನ್ ರಸ್ತೆ, ಬಡೆ ಕಮಾನ ರಸ್ತೆ, ಗಣೇಶ ನಗರ, ಗೋಪಾಲಪುರ ಗಲ್ಲಿ ಸೇರಿದಂತೆ ನಗರ ಬಹುತೇಕ ಕಡೆಯಲ್ಲಿ ಜಿಟಿಜಿಟಿ ಮಳೆ ಆರಂಭವಾಗಿತ್ತು.
ರಾಜ್ಯ ಸರ್ಕಾರ ಭಾನುವಾರದ ಲಾಕ್ಡೌನ್ ರದ್ದು ಮಾಡಿದ ಬೆನ್ನಲ್ಲೆ ಬೆಳಗಿನಿಂದ ನಗರದಲ್ಲಿ ಜನ ಸಂಚಾರ ತುಂಬಿ ತುಳುಕುತ್ತಿತು. ಸಂಜೆ ಮಳೆ ಆರಂಭವಾಗುತ್ತಿದ್ದಂತೆ ಜನ ತಮ್ಮ ಮನೆಗಳಿಗೆ ಮರಳಿದರು.
ಮಧ್ಯಾಹ್ನದಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿಗೆ ರೈತರು ಮುಂದಾಗಿದ್ದಾರೆ.