ಕಲಬುರಗಿ: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಯುವತಿ ಅಮೂಲ್ಯ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿವೆ. ಕಲಬುರಗಿ, ಬೀದರ್, ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ಅಮೂಲ್ಯ ವಿರುದ್ಧ ವಿವಿಧ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿಯಲ್ಲಿ ಶ್ರೀರಾಮ ಸೇನೆ ಆಕ್ರೋಶ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯಳನ್ನು ಗಡಿಪಾರು ಮಾಡುವಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ಹಾಗೂ ಅಮೂಲ್ಯ ಭಾವಚಿತ್ರಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ನಲ್ಲಿ ಕರವೇ ಪ್ರತಿಭಟನೆ: ಬೀದರ್ನ ಅಂಬೇಡ್ಕರ್ ವೃತ್ತದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ಅಮೂಲ್ಯ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರ ಹಾಕಿದರು. ದೇಶ ವಿರೋಧಿ ಕೃತ್ಯಕ್ಕೆ ಸಾಕ್ಷಿಯಾದ ಕಾರ್ಯಕ್ರಮ ಆಯೋಜಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಚಿಟಗುಪ್ಪಾದಲ್ಲೂ ಪ್ರತಿಭಟನೆ: ಹಾಗೆಯೇ ಬೀದರ್ನ ಹುಮನಾಬಾದ್ ತಾಲೂಕಿನ ಚಿಟಗುಪ್ಪಾ ನಗರದಲ್ಲೂ ಕೂಡ ಅಮೂಲ್ಯ ವಿರುದ್ದ ಕನ್ನಡ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಗಡಿಪಾರು ಮಾಡುವಂತೆ ಆಗ್ರಹ: ಹುಬ್ಬಳ್ಳಿ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಅಮೂಲ್ಯ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.
ವಿಜಯಪುರದಲ್ಲಿ ಬಿಜೆಪಿ ಪ್ರತಿಭಟನೆ: ದೇಶ ವಿರೋಧಿ ಕೂಗನ್ನು ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಫೆ.24 ರಂದು ನಗರದಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ದೇಶ ವಿರೋಧಿ ಹೇಳಿಕೆ ನೀಡದಂತೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.