ಮುದ್ದೇಬಿಹಾಳ : ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹೆಚ್ಚಿನ ಕ್ರಮ ಕೈಗೊಂಡಿದೆ. ಈ ಅಭಿಯಾನದಲ್ಲಿ ನಾಗರಿಕರೂ ಸಹ ಕೈ ಜೋಡಿಸಿದ್ರೆ ಅದರ ನಿಯಂತ್ರಣ ಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಹೇಳಿದರು.
ಪುರಸಭೆ ಆಡಳಿತದ ಹುಡ್ಕೋ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಕೊವಿಡ್ -19 ನಿಯಂತ್ರಣಕ್ಕಾಗಿ ಹಮ್ಮಿಕೊಂಡಿದ್ದ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನಾಗರಿಕರನ್ನು ಒಳಗೊಂಡ ಸಮಿತಿ ರಚಿಸಿದೆ. ಇದರಲ್ಲಿ ಅವರೂ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು.
ಆಯಾ ಬಡಾವಣೆಗಳಲ್ಲಿ ಕೊರೊನಾ ಪಾಸಿಟಿವ್ ಆಗಿರುವವರನ್ನು ಗುರುತಿಸಿ, ಅವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡುವ, ಇಲ್ಲವೇ ಸಮೀಪದ ಕ್ವಾರಂಟೈನ್ ಕೇಂದ್ರಗಳಿಗೆ ಸೇರಿಸುವ, ಸೂಕ್ತ ಚಿಕಿತ್ಸೆ ಒದಗಿಸುವ ಹಾಗೂ ಸಂಬಂಧಿಸಿದ ಸಲಹೆ ನೀಡುವ ಕೆಲಸ ನಡೆಯಬೇಕು ಎಂದರು.
ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಕೊರೊನಾ ತಡೆಗೆ ಪರಸ್ಪರ ಅಂತರ ಕಾಪಾಡುವುದರ ಜೊತೆಗೆ ಮಾಸ್ಕ್ ಧರಿಸಬೇಕು ಮತ್ತು ಆಗಾಗ್ಗೆ ಕೈ ತೊಳೆಯಬೇಕು. ಸರ್ಕಾರ ಒಂದರಿಂದಲೇ ಕೊರೊನಾ ನಿಯಂತ್ರಣ ಅಸಾಧ್ಯ. ಅದಕ್ಕೆ ಸ್ಪಂದಿಸಿ ನಾಗರಿಕರು ಮನೆಯಲ್ಲಿಯೇ ಉಳಿದರೆ ಬಹುತೇಕ ಕೊರೊನಾ ನಿಯಂತ್ರಣ ಸಾಧ್ಯ ಎಂದರು.