ಮುದ್ದೇಬಿಹಾಳ (ವಿಜಯಪುರ) : ದಿನೇದಿನೆ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಸೋಂಕು ನಿಯಂತ್ರಣದ ಸಲುವಾಗಿ ತಾಲೂಕಿನ ನಾಲತವಾಡ ಪಟ್ಟಣದ ವ್ಯಾಪಾರಸ್ಥರು ವಿಶೇಷ ತೀರ್ಮಾನ ಕೈಗೊಂಡಿದ್ದಾರೆ.
ನಾಲತವಾಡ ಪಟ್ಟಣದ ವ್ಯಾಪ್ತಿಯಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಕಿರಾಣಿ, ಬಟ್ಟೆ, ಹಾರ್ಡ್‌ವೇರ್, ಬಂಗಾರ ಸೇರಿ ಇತರೆ ಅಂಗಡಿ ಮಾಲೀಕರು ನಾಳೆಯಿಂದ ಜೂನ್ ಅಂತ್ಯದವರೆಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ಮಾಡುವುದಾಗಿ ಸ್ವಯಂ ಪ್ರೇರಿತ ನಿರ್ಧಾರ ಕೈಗೊಂಡಿದ್ದಾರೆ.
ನಾಲತವಾಡ ಪಟ್ಟಣದ ಜೆ ಟಿ ಓಸ್ವಾಲ್ ಅವರ ನಿವಾಸದಲ್ಲಿ ಸಭೆ ಕರೆದು ತೀರ್ಮಾನ ಕೈಗೊಂಡಿರುವ ವ್ಯಾಪಾರಿಗಳು, ಕಳೆದ ಎರಡು ತಿಂಗಳಿನಿಂದ ಕೊರೊನಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಆದೇಶ ಪಾಲನೆ ಮಾಡಿದ್ದರು. ಸದ್ಯ ತಮ್ಮ ನಿತ್ಯದ ವ್ಯಾಪಾರ-ವ್ಯವಹಾರದ ಸಮಯ ಬದಲಿಸುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಜೋಡಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ವಾರದ 6 ದಿನಗಳಲ್ಲಿ ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಉಳಿದ ಸೋಮವಾರ (ಸಂತೆ ದಿನ)ದಂದು ಮಾತ್ರ ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವ್ಯಾಪಾರ ಮಾಡುವುದಾಗಿ ತೀರ್ಮಾನ ಕೈಗೊಂಡಿದ್ದಾರೆ. ಈ ವೇಳೆ ವ್ಯಾಪಾರಿಗಳಾದ ಈರಯ್ಯ ಸ್ಥಾವರಮಠ, ದೇವಿಚಂದ್ ಓಸ್ವಾಲ್, ಜೆ ಟಿ ಓಸ್ವಾಲ್, ಸಂಗಣ್ಣ ಇಳಕಲ್, ಶರಣಪ್ಪ ಇಳಕಲ್, ಬಸವರಾಜ ಪಣಿಗೋಳ, ಈರಣ್ಣ ಕಸಬೇಗೌಡ್ರ,ಬಸವರಾಜ ಮೇಗಿಲಮನಿ, ವೀರೇಶ್ ಪೂಜಾರಿ, ವಿರುಪಾಕ್ಷಪ್ಪ ಪಡಶೆಟ್ಟಿ, ವೀರೇಶ್ ಪಟ್ಟಣಶೆಟ್ಟಿ, ಬಸವರಾಜ ಚೌಧ್ರಿ, ಲಲಿತ್ ಸಂಘವಿ, ಲಲಿತ್ ಜೈನ್, ರಮೇಶ ಗೋಂಧಳೆ, ಸುಭಾಷ್ ಪತ್ತಾರ್ ಮತ್ತಿತರರಿದ್ದರು.