ಮುದ್ದೇಬಿಹಾಳ: ಪಟ್ಟಣದ ಮಿನಿ ವಿಧಾನ ಸೌಧದ ಪಕ್ಕದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಲೋಕಾರ್ಪಣೆಗೆ ಸಿದ್ಧಗೊಂಡಿದ್ದರೂ ಸಹ ಅದನ್ನು ಉದ್ಘಾಟನೆ ಮಾಡದಿರುವುದರಿಂದ ಅನೈತಿಕ ಚಟುವಟಿಕೆಗಳನ್ನು ಮಾಡುವವರಿಗೆ ಅನುಕೂಲ ಒದಗಿಸಿಕೊಟ್ಟಂತಾಗಿದೆ ಎಂದು ದಲಿತಪರ ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Appeal letter](https://etvbharatimages.akamaized.net/etvbharat/prod-images/07:28:17:1598018297_kn-mbl-ambedakrbahvan-21-02-kac1030_21082020192657_2108f_1598018217_681.jpg)
ಪಟ್ಟಣದ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಸಮಾಜ ಕಲ್ಯಾಣ ಇಲಾಖೆಗೆ ತೆರಳಿ ಅಧಿಕಾರಿ ಉಮೇಶ ಜಾಧವ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸುಮಾರು 2.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಟ್ಟಡ ನಿರ್ಮಿಸಿ ಒಂದು ವರ್ಷ ಗತಿಸಿದರೂ ಸಹ ಅದನ್ನು ಉದ್ಘಾಟಿಸುವ ಗೋಜಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದರಿಂದಾಗಿ ಸಮುದಾಯ ಭವನದ ಸುತ್ತಮುತ್ತ ಪ್ರತಿನಿತ್ಯ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.
ಪ್ರವೇಶ ದ್ವಾರದಲ್ಲಿ ಪುಂಡ ಪೋಕರಿಗಳು ಗುಟಕಾ ತಿಂದು ಉಗಿದು ಹಾಗೂ ಮದ್ಯ ಸೇವಿಸಿ ಅಸಹ್ಯಕರವಾದ ವಾತಾವರಣ ಉಂಟು ಮಾಡಿದ್ದಾರೆ. ಹಾಗಾಗಿ ಈ ಕೂಡಲೇ ಅಗತ್ಯ ಸೌಲಭ್ಯಗಳನ್ನು ಭವನಕ್ಕೆ ಒದಗಿಸಿ ಉದ್ಘಾಟನೆ ಮಾಡಬೇಕು ಎಂದು ಒತ್ತಾಯಿಸಿದರು.