ವಿಜಯಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಹೊಟ್ಟೆ ಉರಿಯಾಗಿದೆ. ಕೇಂದ್ರ ಸಚಿವರಾಗಿದ್ದಾರೆ. ಬಹಳ ತಿಳಿದುಕೊಂಡವರು ಈ ರೀತಿ ಮಾತನಾಡಬಾರದು ಎಂದು ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಭಾಗ್ಯಗಳನ್ನು ನಾವು ಯಾವಾಗಲೂ ಶ್ರೀಮಂತರಿಗೆ ಕೊಟ್ಟಿಲ್ಲ. ಅನ್ನಭಾಗ್ಯ, ಬಸ್ ಉಚಿತ, 200 ಯುನಿಟ್ ವಿದ್ಯುತ್, ಯುವನಿಧಿ ಇವುಗಳೆಲ್ಲ ಶ್ರೀಮಂತರಿಗಾ? ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ಸ್ಥಾನ ಸೇಲ್‌ಗೆ ಇರಬಹುದು: ಬಿಜೆಪಿಯವರಿಗೆ ಒಬ್ಬ ಪ್ರತಿಪಕ್ಷದ ನಾಯಕ ಆಯ್ಕೆ ಮಾಡಲಾಗಿಲ್ಲ, ಮೊದಲು ಬಾರಿ ಬಜೆಟ್‌ನಲ್ಲಿ ಪ್ರತಿಪಕ್ಷದ ನಾಯಕರಿಲ್ಲದ್ದಾಗಿತ್ತು. ಅದನ್ನು ಸಹ ಸೇಲ್‌ಗೆ ಇಟ್ಟಿರಬೇಕು ಎಂದು ಸಂಶಯ ವ್ಯಕ್ತವಾಗುತ್ತಿದೆ. ಮಖ್ಯಮಂತ್ರಿ ಸ್ಥಾನ ಸೇಲ್‌ಗೆ ಇಟ್ಟ ಹಾಗೆ ಪ್ರತಿಪಕ್ಷದ ನಾಯಕನ ಸ್ಥಾನವೋ ಸಹ ಸೇಲ್‌ಗೆ ಇಟ್ಟಿರಬಹುದು. ಆ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಮಾಡಿರಬೇಕು ಎಂದು ಅನ್ನಿಸುತ್ತಿದೆ ಎಂದು ಬಿಜೆಪಿ ನಾಯಕರ ಕಾಲೆಳೆದರು.
ಈ ಹಿಂದೆ ಅವರದ್ದೇ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ಕೊಡಬೇಕು ಎಂದಿದ್ದರು. ಈಗ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಎಷ್ಟು ಕೊಡಬೇಕು ಎನ್ನುವುದನ್ನು ಅವರೇ ಹೇಳಬೇಕು ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಗುಡುಗಿದರು.
ನುಡಿದಂತೆ ನಡೆದಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಎರಡು ಪ್ರಮುಖ ಹಂತದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು. ಮೊದಲು ಹಂತವಾಗಿ 5 ಗ್ಯಾರಂಟಿ ಯೋಜನೆ ಜಾರಿ ಮಾಡುವುದು. ಇದಕ್ಕೆ 52 ಸಾವಿರ ಕೋಟಿ ವೆಚ್ಚ ತಗಲುತ್ತದೆ. ಅಭಿವೃದ್ಧಿ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಹಣ ಕ್ರೋಢೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ಆರಂಭ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಗೋ ಶಾಲೆಗಳು ಇವೆ. ಅದಕ್ಕೆ ನೀರು ಒದಗಿಸುವ ಕೆಲಸ ಈ ಹಿಂದೆ ಮಾಡಿದ್ದೇನೆ. ತಮ್ಮ ಬೆಂಬಲ ಸದಾ ಇರುತ್ತದೆ. ಗೋ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ತಾವು ಒದಗಿಸಲು ಸಿದ್ದನಾಗಿದ್ದೇನೆ ಎಂದರು.
ಪಠ್ಯ ಪರಿಷ್ಕರಣೆ ಸದ್ಯಕ್ಕಿಲ್ಲ: ಇನ್ನು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಜ್ಞಾನ ವೃದ್ಧಿಗಾಗಿ ಬೇಕಾದ ಪಠ್ಯವನ್ನು ಒದಗಿಸಬೇಕಾಗಿದೆ. ರೋಹಿತ್ ಚಕ್ರತೀರ್ಥ ಮಾಡಿದ ಅನಾಹುತಗಳನ್ನು ನಾವು ಸರಿಪಡಿಸಬೇಕಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.
ಈ ಬಾರಿ ಪಠ್ಯ ಪರಿಷ್ಕರಣೆಯಲ್ಲಿ ರಾಷ್ಟ್ರ ನಾಯಕರ ಚರಿತ್ರೆ ಅಳವಡಿಸುತ್ತೇವೆ. ಡಾ.ಅಂಬೇಡ್ಕರ್, ನಾರಾಯಣಗುರು, ಕುವೆಂಪು, ಗಾಂಧೀಜಿ, ಭಗತಸಿಂಗ ಅವರ ಚರಿತ್ರೆಗೆ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು. ಇದರ ಜತೆ ಸಿದ್ದೇಶ್ವರ ಶ್ರೀ, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ ಸ್ವಾಮೀಜಿ ಸೇರಿದಂತೆ ಅನೇಕ ಪುಣ್ಯ ಪುರುಷರ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸುವ ಆಶಯ ತಮಗೆ ಇದೆ ಎಂದರು.
ಇದನ್ನೂ ಓದಿ: ವಿಶೇಷ ವ್ಯಕ್ತಿ ವಿಪಕ್ಷ ನಾಯಕ ಆಗ್ತಾರೆ.. ಕಾದು ನೋಡಿ ಎಂದ ಮಾಜಿ ಸಚಿವ ನಿರಾಣಿ