ವಿಜಯಪುರ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ ಯೋಜನೆ ಯುವಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ ಪ್ರತಿಪಕ್ಷಗಳು ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅಗ್ನಿಪಥ ಯೋಜನೆಯನ್ನು ಆರ್ ಎಸ್ ಎಸ್ ಯೋಜನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಹಾಗಾದರೆ ಪಾಕಿಸ್ತಾನ್ ಅಗ್ನಿಪಥ ಎಂದು ಹೆಸರಿಡಬೇಕಿತ್ತಾ? ಎಂದು ವ್ಯಂಗವಾಡಿದರು.
ಹೆಚ್ ಡಿ ಕುಮಾರಸ್ವಾಮಿ ಅವರದ್ದು ಮೂರ್ಖತನದ ಹೇಳಿಕೆಯಾಗಿದೆ. ಅದಲ್ಲದೆ ಯೋಜನೆಗೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸುತ್ತಿದೆ. ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಬದಲು ಪಾಕಿಸ್ತಾನ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಎಂದು ಹೆಸರು ಬದಲಿಸಿಕೊಳ್ಳಲಿ, ಅವರು ಪಾಕಿಸ್ತಾನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜನಪ್ರತಿನಿಧಿಗಳ ಮಕ್ಕಳನ್ನು ಸೇನೆ ಸೇರಿಸಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಮೊದಲು ಅವರ ಮಗನನ್ನು ಸೇರಿಸಲಿ. ಅದರ ಜತೆ ರಾಹುಲ್ ಗಾಂಧಿಯನ್ನು ಪಾಕಿಸ್ತಾನ ಸೇನೆಗೆ ಸೇರಿಸಲಿ ಎಂದು ತಿರುಗೇಟು ನೀಡಿದರು. ಸದ್ಯ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ ಯೋಜನೆ ಇಸ್ರೇಲ್ ಮಾದರಿ ಯೋಜನೆಯಾಗಿದೆ. ಅವರಂತೆ ಎಲ್ಲರೂ ಕನಿಷ್ಠ ಪಕ್ಷ 10 ವರ್ಷವಾದರೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಯತ್ನಾಳ್ ಹೇಳಿದರು.
ಸಂಪುಟ ವಿಸ್ತರಣೆ ಆಗಲ್ಲ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ, ಈ ಗಾಡಿ ಹೀಗೆ ತಳ್ಳುತ್ತಾ ಹೋಗುತ್ತದೆ. ಸಿಎಂ ಬೊಮ್ಮಾಯಿ ದೆಹಲಿಗೆ ಹೋಗುತ್ತಾರೆ. ಅಲ್ಲಿ ಚಹಾ ಕುಡಿದು ವಾಪಸ್ ಬರುತ್ತಾರೆ ಎಂದು ಸ್ವಪಕ್ಷೀಯ ಸಿಎಂ ನಡೆಗೆ ಬಗ್ಗೆ ವ್ಯಂಗವಾಡಿದರು.
ಮೀಸಲಾತಿ ಬಗ್ಗೆ 22 ಕ್ಕೆ ಸಭೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಹಿನ್ನೆಲೆಯಲ್ಲಿ ಇದೇ 22ರಂದು ಸಚಿವ ಸಿ.ಸಿ. ಪಾಟೀಲ ನಿವಾಸದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ತಾವು, ಕೂಡಲಸಂಗಮ ಶ್ರೀಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಸಿಎಂ ಅವರು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ನಾವು ಕೇವಲ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೇಳುತ್ತಿಲ್ಲ, ಎಲ್ಲ ಸಮುದಾಯಗಳಿಗೂ ಮೀಸಲಾತಿ ದೊರೆಯಬೇಕಾದರೆ, ಮೀಸಲಾತಿ ಪುನರ್ ಪರಿಶೀಲನೆ ಆಗಬೇಕು. ಆಗ ಎಲ್ಲ ಸಮುದಾಯಗಳಿಗೂ ನ್ಯಾಯ ದೊರೆಯಲಿದೆ ಎಂದು ಹೇಳಿದರು.
ಓದಿ : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಇಬ್ಬರು ಶಾಸಕರ ವಿರುದ್ಧ ದೂರು ನೀಡಲು ಜೆಡಿಎಸ್ ತಯಾರಿ