ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 16 ಕೆರೆಗಳನ್ನು ತುಂಬಿಸುವ ಯೋಜನೆ ನನ್ನ ಕನಸಿನ ಕೂಸು. ಈ ಯೋಜನೆ ಬಗ್ಗೆ ಮಾತನಾಡಲು ಯಾರ ಅನುಮತಿ ಬೇಕಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ತಿರುಗೇಟು ನೀಡಿದರು.
ಈ ಕುರಿತು ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗಲೂ ಮಾತನಾಡಿದ್ದೇನೆ. ಮುಂದೆ ಕೂಡ ಮಾತನಾಡುತ್ತೇನೆ. ತಿಡಗುಂದಿ ಅಕ್ವಾಡಕ್ಟ್ ಮೂಲಕ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ನಾಗಠಾಣ ಮತ್ತು ಇಂಡಿ ಮತಕ್ಷೇತ್ರಗಳ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಹಾಗಾಗಿ ಸರ್ಕಾರದಲ್ಲಿ ಈ ಯೋಜನೆ ಜಾರಿಗೆ ಒಪ್ಪಿಗೆ ಕೊಡಿಸಿದ್ದೆ.
ಕಳೆದ ಒಂದು ವರ್ಷದಿಂದ ಬಾಕಿಯಿದ್ದ ಈ ಯೋಜನೆಯ ಬಗ್ಗೆ ಜುಲೈ 9 ರಂದು ಸಿಎಂ ಬಿ. ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇನೆ. ಈ ವೇಳೆ 16 ಕೆರೆಗಳಿಗೆ ನೀರು ತುಂಬಿಸುವ 140 ಕೋಟಿ ರೂ. ಯೋಜನೆ ಮತ್ತು ಹಳ್ಳ ಕೊಳ್ಳಗಳಿಗೆ ನೀರು ಹರಿಸುವ 60 ಕೋಟಿ ರೂ. ವೆಚ್ಚದ ಯೋಜನೆಗಳ ಬೇಡಿಕೆ ಕುರಿತು ಸಿಎಂ ಮುಂದಿಟ್ಟಿದ್ದೆ. ಅದೇ ದಿನ ಮಧ್ಯಾಹ್ನ ಸಿಎಂ ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
ತಾಂತ್ರಿಕವಾಗಿ ಹೇಳಬೇಕೆಂದ್ರೆ ಗೆಜೆಟ್ ನೋಟಿಫಿಕೇಷನ್ ಆಗುವ ಮುಂಚೆಯೇ 1,000 ಕಿ. ಮೀ. ಪೂರ್ವ ತಯಾರಿಯಾಗಿ ಮುಖ್ಯ ಕಾಲುವೆ, ಉಪಕಾಲುವೆ, ಹೆಡ್ ವರ್ಕ್ ಮಾಡಿದ್ದೇನೆ. ಮುಂದಾಲೋಚನೆ ಇಟ್ಟುಕೊಂಡು 10 ರಿಂದ 15 ಸಾವಿರ ಕೋಟಿ ರೂ. ಖರ್ಚುಮಾಡಿ ಹೆಡ್ ವರ್ಕ್, ಕೆನಾಲ್ ನೆಟವರ್ಕ್, ಕಾಲುವೆಗಳು, ಅಕ್ವಾಡಕ್ಟ್ ನಿರ್ಮಿಸಿದ್ದೇನೆ. ಇದರ ಫಲವಾಗಿ ವಿಜಯಪುರ ಜಿಲ್ಲೆಯಲ್ಲಿ ಬಂದ್ ಆಗಿದ್ದ ಕೊಳವೆ ಬಾವಿಗಳು ಪುನಶ್ಚೇತನಗೊಂಡಿವೆ. ಇಲ್ಲದಿದ್ದರೆ ಗೆಜೆಟ್ ನೋಟಿಫಿಕೇಷನ್ಗಾಗಿ ಇನ್ನೂ 20 ವರ್ಷ ಕಾಯಬೇಕಿತ್ತು ಎಂದು ಅವರು ತಿಳಿಸಿದರು.
2016 ರಲ್ಲಿ ನಾನು ಡಿಪಿಆರ್ ತಯಾರಿಸಿ ಬಿಟ್ಟು ಹೋದ ಸ್ಥಳಗಳಿಗೂ ನೀರಾವರಿ ಸಾಮರ್ಥ್ಯವನ್ನು ಶೇ. 115 ಯಿಂದ ಶೇ. 100ಕ್ಕೆ ಇಳಿಸಿ 10 ಟಿಎಂಸಿ ನೀರು ಉಳಿಸಿ 1.25 ಲಕ್ಷ ಎಕರೆ ಹೆಚ್ಚುವರಿ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡೆ. ಇದು ನನ್ನ ಕೊಡುಗೆ. ಅಂದು 51,048 ಕೋಟಿ ರೂ. ಕ್ಯಾಬಿನೆಟ್ನಲ್ಲಿ ಮಂಜೂರಾತಿ ಒದಗಿಸಲು ಗುರಿ ಇಟ್ಟುಕೊಂಡಿದ್ದೆ. ಇದನ್ನು ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟದ ಸಹೋದ್ಯೋಗಿಗಳು ಯಾವುದೇ ಪ್ರಶ್ನೆ ಮಾಡದೆ ಒಪ್ಪಿಗೆ ಸೂಚಿಸಿದ್ದರು ಎಂದರು.
ಇಂಡಿ ತಾಲೂಕಿಗೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸಲು ಎರಡು ತಂಡ ರಚಿಸಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶಕ್ಕೆ ಕಳುಹಿಸಿದ್ದೆ. ನಾಗಠಾಣ ಬ್ರಾಂಚ್ ಕೆನಾಲ್ ಮತ್ತು ತಿಡಗುಂದಿ ಬ್ರಾಂಚ್ ಕೆನಾಲ್ ಓವರಲ್ಯಾಪ್ ಆಗದಂತೆ ಕ್ರಮ ಕೈಗೊಂಡಿದ್ದೆ. ಗೆಜೆಟ್ ನೋಟಿಫಿಕೇಷನ್ ಇಲ್ಲದಿದ್ದರೂ ಬಹುತೇಕ ಕಾಮಗಾರಿ ಮಾಡಿದೆ. ಚಡಚಣ, ಹೊರ್ತಿ ಭಾಗಕ್ಕೆ ನೀರು ಒದಗಿಸಲು ಕೆಲಸ ಮಾಡಿದೆ ಎಂದು ತಿಳಿಸಿದರು.
ಕೀಳು ರಾಜಕಾರಣ ಮಾಡುವುದು ನನಗೆ ಅಗತ್ಯವಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಲು ನನಗೆ ಹಕ್ಕಿದೆ. ಕಾವೇರಿ, ಕೃಷ್ಣಾ, ಮೇಕೆದಾಟು ಯೋಜನೆಗಳಲ್ಲಿ ನನ್ನ ಕೊಡುಗೆ ಇದೆ. ರಾಜ್ಯದ ನೆಲ, ಜಲ ವಿಚಾರಗಳ ಬಗ್ಗೆ 2004 ರಿಂದ ಮಾತನಾಡುತ್ತಿದ್ದೇನೆ, ಇಂದೂ ಮಾತನಾಡುತ್ತೇನೆ, ಮುಂದೆಯೂ ಮಾತನಾಡುತ್ತೇನೆ. ಇದಕ್ಕೆ ಯಾರ ಅನುಮತಿ ಬೇಕಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆರಾಮವಾಗಿ ಇರಬಹುದಿತ್ತು. ಆದರೆ, ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಅಂದು ಉಮಾ ಭಾರತಿ ಅವರ ಬಳಿ ಹೋಗಿ ಅಣೆಕಟ್ಟುಗಳ ಅಭಿವೃದ್ಧಿಗೆ ಒಪ್ಪಿಗೆ ಪಡೆದಿರುವುದು ಸಹ ಇದೆ. ನಾನು ಮಾಡಿರುವ ಯೋಜನೆಗಳ ಬಗ್ಗೆ ಮಾತನಾಡಬಹುದು ಎಂದು ಎಂ.ಬಿ. ಪಾಟೀಲ್ ತಿಳಿಸಿದರು.