ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಮಾಡುವ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವತ್ತ ಕಠಿಣ ಪ್ರಯತ್ನ ಮಾಡಬೇಕು ಎಂದು ತಂಗಡಗಿ ಹಡಪದ ಅಪ್ಪಣ ಗುರುಪೀಠದ ಅನ್ನದಾನ ಭಾರತಿ ಶ್ರೀಗಳು ಹೇಳಿದರು.
ತಾಲೂಕಿನ ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನ ಮಠದಲ್ಲಿ ಬಸವ ಪ್ರತಿಷ್ಠಾನ ಸಮಿತಿ ನೇತೃತ್ವದಲ್ಲಿಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶ್ರೀಗಳು, ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂಬುದಕ್ಕೆ ಇಂದು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳೇ ನಿದರ್ಶನವಾಗಿದ್ದಾರೆ ಎಂದರು.
ಧನ್ನೂರ ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕ ಎಸ್.ಕೆ. ಹಡಲಗೇರಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಪ್ರತಿಭಾ ವಿದ್ಯಾರ್ಥಿಗಳಾದ ಪಲ್ಲವಿ ಇಸ್ಲಾಂಪೂರ, ಸೌಮ್ಯಾ ಹುಂಡೇಕಾರ, ಕವಿತಾ ಹಂಗರಗಿ, ಶಶಿಧರ ಹೊಳಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಸವ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಸಿದ್ದಣ್ಣ ಹೊಳಿ, ರಮೇಶ ಲಿಂಗದಳ್ಳಿ, ತಾಲೂಕು ಪಂಚಾಯತ್ ಸದಸ್ಯ ಶ್ರೀಶೈಲ ಮರೋಳ, ಸ್ನೇಹಸಿರಿ ಬಳಗದ ಸಂಚಾಲಕ ಬಸವರಾಜ ನಿಡಗುಂದಿ, ಬಸವರಾಜ ಇಸ್ಲಾಂಪೂರ, ಸಮಿತಿಯ ಪ್ರಮುಖರಾದ ಮಹಾಂತಪ್ಪ ಹುಲ್ಲಳ್ಳಿ, ಚರಲಿಂಗಪ್ಪ ಬಿದರಕುಂದಿ, ಬಸವರಾಜ ಸಜ್ಜನ, ಸಂಗಣ್ಣ ದೇವರಮನಿ, ಎಸ್.ಎಸ್. ಪೂಜಾರಿ, ಸಂಗಯ್ಯ ಗಣಾಚಾರಿ, ಸಿದ್ಧಣ್ಣ ಹೊಳಿ, ಅಶೋಕ ನಿಡಗುಂದಿ, ಬಸವರಾಜ ಡೊಂಗರಗಾವಿ ಇದ್ದರು.