ಮುದ್ದೇಬಿಹಾಳ(ವಿಜಯಪುರ): ಭಾರೀ ಗಾಳಿ ಮಳೆಗೆ ತಾಲೂಕಿನ ಹಡಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೆದ್ದಲಮರಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿನ ಮನೆಯೊಂದಕ್ಕೆ ನೀರು ನುಗ್ಗಿದೆ. ತಾಲೂಕಿನ ಮಾದಿನಾಳ ರಸ್ತೆಯಲ್ಲಿರುವ ಆರು ದೊಡ್ಡ ಮರಗಳು ಧರೆಗುರುಳಿವೆ.
ತಾಲೂಕಿನ ಗೆದ್ದಲಮರಿಯ ಮಲಕಪ್ಪ ಚಲವಾದಿ ಎಂಬುವರ ಮನೆಗೆ ಮಳೆ ನೀರು ನುಗ್ಗಿ ಮನೆಯ ಕೆಲ ಸಾಮಗ್ರಿಗಳಿಗೆ ನೀರು ತಾಕಿದೆ. ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ನೀರು ನಿಂತು ಮನೆಯೊಳಗೆ ನುಗ್ಗಿದೆ ಎಂದು ಹೇಳಲಾಗಿದೆ. ಮನೆಗೆ ನೀರು ನುಗ್ಗಿದ ವಿಷಯ ತಿಳಿಯುತ್ತಲೇ ಪಿಡಿಒ ಶೋಭಾ ಮುದಗಲ್ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ರಭಸದ ಮಳೆ ಆಗಿದೆ. ಕೆಲಕಾಲ ವಿದ್ಯುತ್ ವ್ಯತ್ಯಯವಾಗಿತ್ತು.