ಮುದ್ದೇಬಿಹಾಳ: ತಾಲೂಕಿನ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಾದ ವಿ.ಜಿ. ರಾಮಚಂದ್ರ, ಬಸವರಾಜ ಲಮಾಣಿ, ವಿ.ಎಸ್. ಮಾಶೆಟ್ಟಿ ಹಾಗೂ ಅಶೋಕ ಹಂಚಲಿ ಅವರಿಗೆ ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿರುವ ವಿ.ಜಿ. ರಾಮಚಂದ್ರ ಅವರು ವಿಜ್ಞಾನ ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾದರಿಗಳನ್ನು ತಯಾರಿಸಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ವಿಭಾಗದಿಂದ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಾದ ಬಸವರಾಜ ಲಮಾಣಿ, ತಾಳಿಕೋಟೆಯ ಅಶೋಕ ಹಂಚಲಿ ಹಾಗೂ ಸೃಜನಾತ್ಮಕ ಕಲೆಗಳ ಮೂಲಕ ಮಕ್ಕಳಲ್ಲಿ ಕಲಿಕಾ ಅಭಿರುಚಿ ಹೆಚ್ಚಿಸುವ ಮೂಲಕ ಅವರ ಜ್ಞಾನದ ವೃದ್ಧಿಗೆ ಶ್ರಮಿಸಿದ ನಾಲ್ವರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮೊದಲಾದವರು ಇದ್ದರು.