ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಹಾಮಳೆಗೆ ಸಾಕಷ್ಟು ಗ್ರಾಮಗಳು ಜಲಾವೃತವಾಗಿವೆ. ಇದರಿಂದಾಗಿ ಜಿಲ್ಲಾಡಳಿತ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆದಿದೆ. ಅಲ್ಲದೆ ಪ್ರವಾಹಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಭೀಮಾನದಿ ಪ್ರವಾಹದಿಂದ ಸಿಂದಗಿ ತಾಲೂಕಿನ ಕಡಣಿ, ಬ್ಯಾಡಗಿಹಾಳ, ದೇವಣಗಾಂವ, ಕುಮಸಗಿ, ಮೊರಟಗಿ, ಚಡಚಣ ತಾಲೂಕಿನ ಉಮರಾಣಿ, ಇಂಡಿ ತಾಲೂಕಿನ ರೂಡಗಿ ಹಾಗೂ ಬರಗುಡಿಗಳಲ್ಲಿ ಸೇರಿ ಒಟ್ಟು 8 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಲ್ಲಿ 341 ಜನ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.
ಸದ್ಯ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ನೇಮಕವಾಗಿರುವ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ತಾಳಿಕೋಟೆ ಬಳಿಯ ದೋಣಿ ನದಿಯಲ್ಲಿ ಸಿಲುಕಿದ್ದ 7 ಜನರನ್ನು ರಕ್ಷಿಸಲಾಗಿದೆ. ತಾರಾಪುರ ಗ್ರಾಮದ ಜಲಾವೃತವಾಗಿರುವ 13 ಕುಟುಂಬಗಳನ್ನು ರಕ್ಷಿಸಲಾಗಿದೆ.
ಮನೆ ಹಾನಿ- ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಾಮಳೆಯಿಂದ 786 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟು 13 ಜಾನುವಾರು ಸಾವಿಗೀಡಾಗಿವೆ.
ಅಲ್ಲದೆ ಸರ್ಕಾರಿ ಕಚೇರಿ, 11 ಸೇತುವೆ ಸೇರಿ 13.22 ಕೋಟಿ ರೂ. ಆಸ್ತಿ ಹಾನಿಯಾಗಿದೆ.
ಬೆಳೆ ಹಾನಿ- ಇಂದು ನಡೆದ ಸಿಎಂ ವಿಡಿಯೋ ಸಂವಾದದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ 1.60 ಲಕ್ಷ ಹೆಕ್ಟೇರ್ ಕ್ಷೇತ್ರದ ಕೃಷಿ ಬೆಳೆ ನಷ್ಟ, ಇದರ ಅಂದಾಜು 636.46 ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ.
ತೋಟಗಾರಿಕೆ ಬೆಳೆ 827 ಹೆಕ್ಟೇರ್ ಕ್ಷೇತ್ರದ 10.33 ಕೋಟಿ ರೂ. ಬೆಲೆ ನಷ್ಟವಾಗಿದ್ದು, ಒಟ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿ 1,61,566 ಹೆಕ್ಟೇರ್ ಕ್ಷೇತ್ರದ ಬೆಳೆ ನಷ್ಟವಾಗಿದೆ. 646.79 ಕೋಟಿ ರೂ. ಅಂದಾಜು ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.