ವಿಜಯಪುರ: ನಗರದಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲಾಡಳಿತ ಗಂಟಲು ದ್ರವ ಸಂಗ್ರಹಿಸಿದರೂ ವರದಿ ಬರಲು ವಾರಗಟ್ಟಲೆ ಕಾಯಬೇಕಿತ್ತು. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಶೀಘ್ರವಾಗಿ ಫಲಿತಾಂಶ ನೀಡುವ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ಆರ್ಟಿಪಿಸಿಆರ್) ಆರಂಭಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ನೂತನ ಲ್ಯಾಬ್ ಆರಂಭಗೊಂಡಿದೆ. ಈ ಪ್ರಯೋಗಾಲಯ ಸ್ಥಾಪನೆಯಿಂದ ದಿನಕ್ಕೆ 200ರಿಂದ 250 ಸ್ವ್ಯಾಬ್‍ಗಳ ಪರೀಕ್ಷಾ ಫಲಿತಾಂಶದ ತಕ್ಷಣ ವರದಿ ಪಡೆಯಲು ಸಹಾಯವಾಗಲಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಹೊಸ ಲ್ಯಾಬ್ ಆರಂಭಿಸಿ ಪ್ರತಿದಿನ 200ಕ್ಕೂ ಅಧಿಕ ಮಾದರಿಗಳ ವರದಿ ಕಡಿಮೆ ಸಮಯಲ್ಲಿ ಪಡೆಯುವ ಲ್ಯಾಬ್ಗೆ ಚಾಲನೆ ನೀಡಿಲಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಇಂತಹ ಪ್ರಯೋಗಾಲಯಗಳು ಸ್ಥಾಪನೆಯಾಗುತ್ತಿರುವುದನ್ನ ಕಂಡ ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸದ್ದಾರೆ.
ಈ ಲ್ಯಾಬ್ ವಿಶೇಷವೆಂದರೆ ಕೊರೊನಾ ವೈರಸ್ ಪತ್ತೆಯ ಜೊತೆಗೆ ಕ್ಯಾನ್ಸರ್ ಹಾಗೂ ಹೆಚ್1ಎನ್1ಗಳಂತಹ ಗಂಭೀರ ರೀತಿಯ ಕಾಯಿಲೆಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಹಿಂದೆ ಟ್ರೂನ್ಯಾಟ್ ಮತ್ತು ಸಿಬಿನ್ಯಾಟ್‍ಗಳಿಂದ ದಿನಕ್ಕೆ 20ರಿಂದ 30 ಸ್ವ್ಯಾಬ್‍ಗಳ ಪರೀಕ್ಷಾ ಫಲಿತಾಂಶ ಬರುತ್ತಿತ್ತು. ಬೆಂಗಳೂರಿನಿಂದ ಬರಬೇಕಾಗಿದ್ದ ಸ್ವ್ಯಾಬ್ ಪರೀಕ್ಷಾ ಫಲಿತಾಂಶದ ವರದಿಗೂ ಕೂಡ 10ರಿಂದ 15 ದಿನಗಳ ಕಾಲ ಕಾಯುವಂತಹ ಪರಿಸ್ಥಿತಿ ಇತ್ತು. ಸೋಂಕಿತ ವ್ಯಕ್ತಿಗಳನ್ನು ತೀವ್ರಗತಿಯಲ್ಲಿ ತಪಾಸಣೆಗೆ ಸಹಾಯವಾಗಿದ್ದು, ಪ್ರತಿ ದಿನಕ್ಕೆ 200 ಜನರನ್ನು ಪರೀಕ್ಷೆಗೆ ಒಳಪಡಿಸಿ ಶೀಘ್ರವೇ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.
ಈ ಲ್ಯಾಬ್ 96 ವೆಲ್ ಕೆಪ್ಯಾಸಿಟಿ ಒಳಗೊಂಡಿದ್ದು, 3- ಬಯೋ ಸೇಫ್ಟಿ ಕ್ಯಾಬಿನೆಟ್, 80-ಡಿಗ್ರಿ ಮತ್ತು 20 ಡಿಗ್ರಿಯ ಥರ್ಮೋಫೀಶರ್ ಫ್ರೀಜರ್ ಮತ್ತು 1-ಆರ್‍ಎನ್‍ಎ ಎಕ್ಸ್ಟ್ರಾಕ್ಟರ್ ಒಳಗೊಂಡಿದೆ. ಇದಲ್ಲದೆ ಬಿಎಲ್‍ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿಯೂ ಆರ್ಟಿಪಿಸಿಆರ್ ಲ್ಯಾಬ್ ಸ್ಥಾಪಿಸಲಾಗಿದ್ದು, ಈ ಲ್ಯಾಬಿನಲ್ಲಿಯೂ 200 ಜನರ ತಪಾಸಣೆಗೆ ಅವಕಾಶವಿದೆ. ಇದರಿಂದಾಗಿ ಇನ್ನು ಮುಂದೆ ಪ್ರತಿದಿನ 400 ಸೋಂಕಿತ ಜನರನ್ನು ಜಿಲ್ಲೆಯಲ್ಲಿ ತಪಾಸಣೆಗೆ ಒಳಪಡಿಸಬಹುದಾಗಿದೆ. ಅಲ್ಲದೆ ಜಿಲ್ಲಾಸ್ಪತ್ರೆ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುವ 5 ಜನ ಸಿಬ್ಬಂದಿಗೆ ಬೆಂಗಳೂರಿನಲ್ಲಿ ಲ್ಯಾಬ್ ಟೆಸ್ಟಿಂಗ್ ಕುರಿತು ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.