ವಿಜಯಪುರ: ಜಿಲ್ಲೆಯಲ್ಲಿ ನದಿಗಳ ಮಹಾ ಪ್ರವಾಹದಿಂದ ಆದ ನಷ್ಟದ ಕುರಿತು ಸಿಎಂ ನಡೆಸಬೇಕಾಗಿದ್ದ ವೈಮಾನಿಕ ಸಮೀಕ್ಷೆ ಮೇಲಿಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಸಿಎಂ ಸಂಕಷ್ಟಕ್ಕೆ ಸಿಲುಕಿರುವ ನಮ್ಮ ಸಮಸ್ಯೆಗೆ ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಿಸಿ ಆರ್ಥಿಕ ಸಂಕಷ್ಟ ಸುಧಾರಿಸುತ್ತಾರೆ ಎನ್ನುವ ಈ ಭಾಗದ ಜನರ ನಿರೀಕ್ಷೆ ಈಗ ಹುಸಿಯಾಗಿದೆ.
ಮಹಾರಾಷ್ಟ್ರ ದ ಉಜ್ಜನಿ ಹಾಗೂ ವೀರಾ ಜಲಾಶಯದಿಂದ ಅವೈಜ್ಞಾನಿಕವಾಗಿ ನೀರು ಬಿಟ್ಟ ಪರಿಣಾಮ ಹಿಂದೆಂದೂ ಕಂಡರಿಯದ ಪ್ರವಾಹ ಉಂಟಾದ ಪರಿಣಾಮ ಈ ಭಾಗದ 28 ಗ್ರಾಮಗಳ ಜನರ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತಾಗಿದೆ. ಈ ವೇಳೆ ಸಿಎಂ ಬಿಎಸ್ವೈ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಸಂತ್ರಸ್ತರ ಸಂಕಷ್ಟ ಅರಿಯಲು ಮುಂದಾಗಿದ್ದರು. ಆದರೆ ಹವಾಮಾನ ವೈಪರೀತ್ಯದಿಂದ ವೈಮಾನಿಕ ಸಮೀಕ್ಷೆ ರದ್ದುಗೊಳಿಸಿ ಸಿಎಂ ಬೆಂಗಳೂರಿಗೆ ತೆರಳಿರುವುದು ಸಂತ್ರಸ್ತರ ಆಶಾ ಗೋಪುರವೇ ಕಳಚಿ ಬಿದ್ದಂತಾಗಿದೆ.
ಇಡೀ ದಿನ ಸಂತ್ರಸ್ತರು ಆಕಾಶದತ್ತ ಮುಖ ಮಾಡಿ ಸಿಎಂ ವೈಮಾನಿಕ ಸಮೀಕ್ಷೆ ವೀಕ್ಷಣೆ ಗಳಿಗೆಯನ್ನು ಎದುರು ನೋಡುತ್ತಿದ್ದರು. ಮನೆ ಮಠ, ಬೆಳೆ ಕಳೆದುಕೊಂಡಿರುವವರು ಮತ್ತೆ ಪರಿಹಾರ ಕೇಂದ್ರಕ್ಕೆ ಮರಳಿದ್ದಾರೆ. ಕನಿಷ್ಠ ಪಕ್ಷ ಉಸ್ತುವಾರಿ ಸಚಿವೆಯಾದರೂ ಏನಾದರೂ ಸಮಾಧಾನ ಮಾಡುವರೇ ಎಂದು ಆಸೆ ಇಟ್ಟುಕೊಂಡಿದ್ದವರಿಗೆ ಅವರು ಎರಡು ದಿನದಲ್ಲಿ ಸಿಎಂ ಜತೆ ಚರ್ಚೆ ನಡೆಸಿ ಶೀಘ್ರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಭೀಮಾ ಮತ್ತು ಡೋಣಿ ನದಿ ಪ್ರವಾಹದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟ ಸದ್ಯ 750 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಳೆ ನೀರು ಇಳಿದ ಮೇಲೆ ವ್ಯವಸ್ಥಿತವಾಗಿ ಮತ್ತೊಮ್ಮೆ ಸರ್ವೆ ಮಾಡಲಿದ್ದು, ಆ ಸರ್ವೆ ಆಧಾರದ ಮೇಲೆ ಸರ್ಕಾರ ಪರಿಹಾರ ಘೋಷಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸದ್ಯ ಪ್ರವಾಹದಿಂದ 2 ಲಕ್ಷಕ್ಕೂ ಅಧಿಕ ಎಕರೆ ಬೆಳೆ ನಾಶವಾಗಿದೆ. ಪ್ರವಾಹದಿಂದ ಇಬ್ಬರು ಮೃತರಾಗಿದ್ದು, 16 ಜಾನುವಾರುಗಳು ಸಾವೀಗಿಡಾಗಿವೆ. 42 ಪರಿಹಾರ ಕೇಂದ್ರಗಳಲ್ಲಿ 18 ಮಾತ್ರ ಚಾಲ್ತಿಯಲ್ಲಿವೆ. ಮಳೆ ಪ್ರಮಾಣ ಇಳಿಮುಖವಾಗುತ್ತಿರುವ ಕಾರಣ ಸಂತ್ರಸ್ತರು ವಾಪಸ್ ಮನೆಗೆ ತೆರಳುತ್ತಿದ್ದಾರೆ. ಜಿಲ್ಲೆಯಲ್ಲಿ ಆಗಿರುವ ಅಪಾರ ನಷ್ಟ ಭರಿಸಲು ರಾಜ್ಯ ಸರ್ಕಾರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಜಿಲ್ಲೆಯ ಸಚಿವರು ಮುಂದಾಗಿದ್ದಾರೆ.