ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಜಮ್ಮಲದಿನ್ನಿಯ ಕೋವಿಡ್ ಕೇರ್ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ಈಟಿವಿ ಭಾರತ ವರದಿ ಪ್ರಸಾರವಾಗ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಕೋವಿಡ್ ಕೇಂದ್ರದಲ್ಲಿನ ಸೋಂಕಿತರ ಸಮಸ್ಯೆ ಆಲಿಸಿದ್ದಾರೆ. ಅಲ್ಲದೇ, ಶುಚಿತ್ವಕ್ಕೆ ಕ್ರಮ ಕೈಗೊಂಡಿದ್ದಾರೆ.
ಪಿಪಿಇ ಕಿಟ್ ಧರಿಸಿ ಸ್ವಚ್ಛತಾ ಕಾರ್ಯ : ಕೊರೊನಾ ಸೋಂಕಿತರನ್ನು ಕರೆದೊಯ್ಯುವಾಗ ಹಾಗೂ ಮರಣ ಹೊಂದಿದವರ ಶವ ತೆಗೆದುಕೊಂಡು ಹೋಗುವಾಗ ಮಾತ್ರ ಪಿಪಿಒ ಕಿಟ್ ಒದಗಿಸುತ್ತಿದ್ದ ಜಿಲ್ಲಾಡಳಿತ, ಇದೀಗ ಜಮ್ಮಲದಿನ್ನಿ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿರುವ ಸಿಬ್ಬಂದಿಗೂ ಪಿಪಿಇ ಕಿಟ್ ಒದಗಿಸಿದೆ. ಅಧಿಕಾರಿಗಳ ಎದುರಿಗೆ ಪಿಪಿಇ ಕಿಟ್ ಧರಿಸಿದ ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಅಲ್ಲದೇ, ಕೋವಿಡ್ ಕೇರ್ ಸೆಂಟರ್ಗೆ ಸ್ಯಾನಿಟೈಸ್ ಮಾಡಲಾಗಿದೆ. ಟಿಸಿ ರಿಪೇರಿ ಮಾಡಿ ಎಲ್ಲರಿಗೂ ನೀರಿನ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವರದಿ ಮಾಡಿದ ಈಟಿವಿ ಭಾರತ್‌ಗೆ ಸೋಂಕಿತರು ಹಾಗೂ ಅವರ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅನ್ಯ ರಾಜ್ಯಗಳಿಂದ ಬರುವ ಜನರಿಗಾಗಿ ಕ್ವಾರಂಟೈನ್ ಕೇಂದ್ರ ಮಾಡಲಾಗಿತ್ತು. ಬಳಿಕ ಈ ವಸತಿ ಶಾಲೆಯನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾಡಲಾಗಿತ್ತು. ಈ ಕೋವಿಡ್ ಕೇರ್ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ಸೋಂಕಿತರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಈ ಬಗ್ಗೆ ಈಟಿವಿ ಭಾರತ್‌ನಲ್ಲಿ ವರದಿ ಕೂಡ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಶೀಲ್ದಾರ್ ಜಿ ಎಸ್ ಮಳಗಿ, ತಾಲೂಕಾ ಪಂಚಾಯತ್ ಇಒ ಶಶಿಕಾಂತ ಶಿವಪೂರೆ, ಡಾ.ಸತೀಶ್ ತಿವಾರಿ, ಕಂದಾಯ ನಿರೀಕ್ಷಕ ಡಿ ಎಸ್ ತಳವಾರ ಮತ್ತಿತರರು ಸೋಂಕಿತರ ಸಮಸ್ಯೆ ಕೇಳಿದ್ದಾರೆ.
ಅಧಿಕಾರಿಗಳ ಎದುರು ದೂರಿನ ಸುರಿಮಳೆ : ಇಲ್ಲಿ ಮೂಲಸೌಕರ್ಯಗಳೇ ಇಲ್ಲ. ವಯೋವೃದ್ಧ ರೋಗಿಗಳಿಗೆ ಸಹಾಯ ಮಾಡಲು ಯಾವ ಸಿಬ್ಬಂದಿ ಸಹ ಇಲ್ಲ. ಇಲ್ಲಿನ ರೋಗಿಗಳೇ ಅವರಿಗೆ ನೆರವಾಗುತ್ತಿದ್ದಾರೆ. ರೋಗ ಬೇಗ ಗುಣಮುಖವಾಗಲು ಔಷಧಿ ಬಿಟ್ಟು ಆತ್ಮಸ್ಥೈರ್ಯ ತುಂಬುವ ಯಾವುದೇ ಚಟುವಟಿಕೆಗಳು ಮಾತ್ರ ಇಲ್ಲಿ ನಡೆಯುತ್ತಿಲ್ಲ. ರೋಗಿಗಳಿಗೆ ಸೂಕ್ತ ಸೌಲಭ್ಯ ನೀಡುವ ವ್ಯವಸ್ಥೆ ಆಗಬೇಕು ಎಂದು ಸೋಂಕಿತರು ಹಾಗೂ ಅವರ ಸಂಬಂಧಿಕರು ಅಧಿಕಾರಿಗಳ ಮುಂದೆ ದೂರು ನೀಡಿದ್ದಾರೆ.