ವಿಜಯಪುರ: ಭೀಮಾ ತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನ ಹಾಗೂ ಆತನ ಅಂಗರಕ್ಷಕ, ಕಾರು ಚಾಲಕ ಕೊಲೆ ಪ್ರಕರಣಕ್ಕೆ ಬಂಧಿಸಿದಂತೆ ಮತ್ತೆ ಮೂವರನ್ನು ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಭೀಮಾ ತೀರದಲ್ಲಿ ಗುಂಡಿನ ದಾಳಿ: ಮಹಾದೇವ ಸಾಹುಕಾರ ಸಹಚರ ಬಾಬುರಾವ್ ಸಾವು
ಬಂಧಿತರನ್ನು ಹಸನಡೋಂಗ್ರಿ ಬಡೇಗರ, ಕಲ್ಲಪ್ಪ ಭಜಂತ್ರಿ ಹಾಗೂ ಈರಣ್ಣ ಭಜಂತ್ರಿ ಎಂದು ಗುರುತಿಸಲಾಗಿದೆ. ಮೂವರು ವಿಜಯಪುರದ ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿಗಳೆಂದು ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಭೀಮಾ ತೀರದ ಮಹಾದೇವ ಸಾಹುಕಾರ ಮೇಲೆ ಗುಂಡಿನ ದಾಳಿ
ನವೆಂಬರ್ 2ರಂದು ವಿಜಯಪುರ ಹೊರ ವಲಯದ ಕನ್ನಾಳ ಕ್ರಾಸ್ ಬಳಿ ಮಹಾದೇವ ಸಾಹುಕಾರ ಹಾಗೂ ಆತನ ಬೆಂಬಲಿಗರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಗಾಯಗೊಂಡ ಮಹಾದೇವ ಸಾಹುಕಾರ ಭೈರಗೊಂಡ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತನ ಇಬ್ಬರು ಬೆಂಬಲಿಗರು ಗುಂಡು ತಗುಲಿ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಜನರನ್ನು ಬಂಧಿಸಲಾಗಿದೆ. ಮೂವರು ಸೇರಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.