ವಿಜಯಪುರ : ಕಳೆದ ಐದಾರು ತಿಂಗಳುಗಳಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಇನ್ಮೇಲೆ ಅಸಂಬದ್ಧವಾಗಿ ಹೇಳಿಕೆಗಳನ್ನ ಕೊಡುವುದು ನಿಲ್ಲಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವರಿಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಸಮಾಜದ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಹಿಂದೆ ಹಿಂದೂ ಸಮಾಜ ಇದೆ ಎಂದು ಒಂದು ಸಾಮಾಜವನ್ನು ಎತ್ತಿ ಕಟ್ಟುತ್ತಿದ್ದಾರೆ.
ಇದು ಸರಿ ಅಲ್ಲ. ಉಂಡ ತಟ್ಟೆಯನ್ನು ಒದೆಯುವುದು ಯತ್ನಾಳ್ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ನಿರಾಣಿ, ಅರವಿಂದ ಬೆಲ್ಲದ್ ಅವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ಶಿವಾನಂದ್ ಪಾಟೀಲ್ ಮೇಲೂ ಸಹ ಈ ಹಿಂದೆ ಆರೋಪ ಮಾಡಿದ್ದರು. ತಮ್ಮ ಬ್ಯಾಂಕಿನಲ್ಲಿ ಹಣ ತೆಗೆದುಕೊಂಡು ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದೇ ರೀತಿಯ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ ಎಂದು ಯತ್ನಾಳ್ ವಿರುದ್ಧ ಕಿಡಿ ಕಾರಿದರು.
ವಾಜಪೇಯಿ ಅವರ 10 ಮೂರ್ತಿ ಮಾಡಿದರೂ ಇವರ ಪಾಪ ಹೋಗುವುದಿಲ್ಲ. ಹಿಂದೆ ಇವರೇ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ರೆಡಿಯಾಗಿದ್ದರು. ನಿಮ್ಮನ್ನು ಯಾರು ತುಳಿಯಲು ಪ್ರಯತ್ನಿಸುತ್ತಿಲ್ಲ. ನಿಮ್ಮ ಮೇಲೆ ನೀವೇ ಸಮಾಧಿ ಕಟ್ಟಿಸಿಕೊಳ್ಳುತ್ತಿದ್ದೀರಿ.
ಯತ್ನಾಳ್ ಅವರನ್ನು ವಾಪಸ್ ಬಿಜೆಪಿಗೆ ತೆಗೆದುಕೊಳ್ಳಬೇಡಿ ಎಂದು ಸಾಕಷ್ಟು ಜನ ಹೇಳಿದ್ದರೂ ಕೂಡ ಯಡಿಯೂರಪ್ಪನವರು ನಿಮ್ಮನ್ನ ಮತ್ತೆ ಬಿಜೆಪಿಗೆ ಸೇರಿಸಿಕೊಂಡರು. ಈ ತಪ್ಪಿನಿಂದಲೇ ಯಡಿಯೂರಪ್ಪನವರು ನೋವು ಅನುಭವಿಸುತ್ತಿದ್ದಾರೆ.
ತಾವು ಸಹ ಗಾಜಿನ ಮನೆಯಲ್ಲಿದ್ದೀರಿ. ಮತ್ತೊಬ್ಬರ ಮನೆಯ ಮೇಲೆ ಕಲ್ಲು ಎಸೆಯುವ ಪ್ರಯತ್ನ ಮಾಡಬಾರದು. ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಿ. ನಾನೇನು ಮಾಡಿರುವೆ ನೀವೇನು ಮಾಡಿದ್ದೀರಿ ಅನ್ನೋದನ್ನು ಅರಿತುಕೊಳ್ಳಿ. ಬೇಕಾದರೆ ಈ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.