ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಮ ಪಾಲನೆಯಾಗದೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮವಾಗಿ ಮುಂದಿನ 15 ದಿನಗಳ ಕಾಲ ಮದುವೆ ಸಮಾರಂಭ ಆಯೋಜಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆದೇಶ ನೀಡಿದ್ದಾರೆ.
ರಿಜಿಸ್ಟರ್ ಮದುವೆ ಹೊರತುಪಡಿಸಿ ಹೆಚ್ಚು ಜನ ಸೇರುವಂತಹ ಮದುವೆಗಳನ್ನು ಮುಂದಿನ 15 ದಿನಗಳ ಕಾಲ ನಿಷೇಧಿಸಲಾಗಿದೆ, ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದ್ದಾರೆ.
ಹೋಂ ಕ್ವಾರಂಟೈನ್ ಕಡ್ಡಾಯ : ಜಿಲ್ಲೆಯ ಸಾರ್ವಜನಿಕರ ಆರೋಗ್ಯ ಮತ್ತು ಕ್ಷೇಮದ ಹಿತದೃಷ್ಟಿಯಿಂದ ಪ್ರಯಾಣಿಕರು, ಕೋವಿಡ್ ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ಗೆ ಒಳಪಡಬೇಕು ಹಾಗೂ ನೀಡಲಾದ ಅಗತ್ಯ ಸೂಚನೆಗಳನ್ನು ಅನುಸರಿಸಬೇಕು. ಇದಕ್ಕೆ ತಪ್ಪಿದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಕಾಣಿಸಿಕೊಂಡ ಕೂಡಲೇ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರು, ಕೋವಿಡ್ ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ಗೆ ಒಳಪಡಲು ಮಾರ್ಗಸೂಚಿ ನೀಡಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.