ವಿಜಯಪುರ: ಆಶಾ ಕಾರ್ಯಕರ್ತೆಯರ ವಿವಿಧ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಸಿಕ 12 ಸಾವಿರ ರೂ. ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಕೊರೊನಾ ಭೀತಿ ನಡುವೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಮಾಸಿಕ 12,000 ರೂ. ವೇತನ ನೀಡುವಂತೆ ಕಳೆದ ಹಲವು ತಿಂಗಳಿನಿಂದ ಹೋರಾಟ ಕೈಗೊಂಡರೂ, ರಾಜ್ಯ ಸರ್ಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಕೊರೊನಾದಿಂದ ರಕ್ಷಣೆ ಪಡೆಯಲು ಆರೋಗ್ಯ ಇಲಾಖೆ ಈವರೆಗೂ ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಯಾವುದೇ ಸಾಮಗ್ರಿಗಳನ್ನು ನೀಡಿಲ್ಲ. ಹಾಗಾಗಿ ಸೂಕ್ತ ರಕ್ಷಣೆ ಮತ್ತು ಕಾಲ ಕಾಲಕ್ಕೆ ಕಾರ್ಯಕರ್ತೆಯರಿಗೆ ವೇತನ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
12,000 ರೂ. ವೇತನ ನಿಗದಿ ಮಾಡುವಂತೆ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ, ನೆರವಿಗೆ ರಾಜ್ಯ ಸರ್ಕಾರ ಬಂದು ಅವರ ಬೇಡಿಕೆಗಳನ್ನ ಈಡೇರಿಸಬೇಕು. ಕಾಲ ಕಾಲಕ್ಕೆ ಸರಿಯಾಗಿ ವೇತನ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.