ಕಾರವಾರ: ಜಿಲ್ಲೆಯಲ್ಲಿ ಆಹಾರ ಇಲಾಖೆ ಪಡಿತರವನ್ನ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದು, ಇದೀಗ ಗೋದಾಮಿನ ಅವ್ಯವಸ್ಥೆಯಿಂದಾಗಿ ಅಕ್ಕಿಯಲ್ಲಿ ಹುಳುಗಳಾಗಿದ್ದು, ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ನಗರದ ಬೈತಖೋಲದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮು ಅವ್ಯವಸ್ಥೆಯ ಆಗರವಾಗಿದೆ. ಒಂದೆಡೆ ಮಳೆಯ ನೀರು ಸೋರಿ ಅಲ್ಲಲ್ಲಿ ನೀರು ಸಂಗ್ರಹವಾಗಿದ್ದು ಅಲ್ಲಿಯೇ ಹುಳುಗಳು ಮರಿ ಹಾಕಿ ಕೊಳಚೆ ಪ್ರದೇಶದಂತಾಗಿದೆ. ಅಲ್ಲದೇ ಪಾಳು ಬಿದ್ದ ಕಟ್ಟಡದಂತಿರುವ ಗೋದಾಮಿನ ಸುತ್ತಲೂ ಮಳೆಯ ನೀರು ಸಂಗ್ರಹವಾಗಿದ್ದು ಬಳಕೆಗೆ ಬಾರದಂತಿದೆ. ಆದರೂ ಸಹ ಆಹಾರ ಇಲಾಖೆ ಮಾತ್ರ ತಾಲ್ಲೂಕಿನಲ್ಲಿ ವಿತರಣೆ ಮಾಡಬೇಕಿರುವ ಪಡಿತರದ ಅಕ್ಕಿ ಹಾಗೂ ಗೋಧಿಯನ್ನ ಇದೇ ಗೋದಾಮಿನಲ್ಲಿ ದಾಸ್ತಾನು ಇರಿಸಿದೆ. ಹೀಗೆ ದಾಸ್ತಾನು ಇರಿಸಿರುವ ಅಕ್ಕಿ, ಗೋಧಿಯಲ್ಲಿ ಹುಳುಗಳಾಗಿವೆ.
ಅಷ್ಟೇ ಅಲ್ಲದೇ ಅಕ್ಕಿ ಚೀಲಗಳನ್ನ ಇರಿಸಿರುವುದರ ಪಕ್ಕದಲ್ಲೇ ಇಲಿಗಳು ಸಹ ಸತ್ತು ಬಿದ್ದಿದ್ದು ಇವತ್ತು ಅದೇ ಗೋದಾಮಿನಲ್ಲೇ ಮತ್ತೆ ಅಕ್ಕಿಯನ್ನ ದಾಸ್ತಾನು ಮಾಡಲು ಮುಂದಾಗಿದ್ದರು. ಈ ವೇಳೆ ಸ್ಥಳೀಯರು ಮುತ್ತಿಗೆ ಹಾಕಿದ್ದು ಯಾವುದೇ ಕಾರಣಕ್ಕೂ ಅಕ್ಕಿಯನ್ನ ಇಂತಹ ಗೋದಾಮಿನಲ್ಲಿ ಸಂಗ್ರಹಿಸದಂತೆ ಆಗ್ರಹಿಸಿದ್ದಾರೆ.
ಗೋದಾಮಿನ ಅವ್ಯವಸ್ಥೆ ಕುರಿತು ಸ್ಥಳೀಯರಿಂದ ದೂರು ಬಂದ ಬಳಿಕ ಸ್ಥಳಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿದ್ದರೂ ಸಹ ಅಕ್ಕಿ ಉತ್ತಮ ಗುಣಮಟ್ಟದ್ದಾಗಿದ್ದು ಅಕ್ಕಿಗೆ ಔಷಧ ಸಿಂಪಡಣೆ ಮಾಡಲಾಗಿದೆ. ಆದಷ್ಟು ಬೇಗ ಬೇರೆ ಗೋದಾಮಿಗೆ ದಾಸ್ತಾನನ್ನು ಸ್ಥಳಾಂತರಿಸಲಾಗುವುದು ಎಂದಿದ್ದಾರೆ.