ಕಾರವಾರ: 1971ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ಭಾರತ ಜಯಗಳಿಸಿದ ನೆನಪಿಗಾಗಿ ಇಂದು ಕಾರವಾರದಲ್ಲಿ ಜಿಲ್ಲಾಡಳಿತ ಹಾಗೂ ಐಎನ್ಎಸ್ ಕದಂಬ ನೌಕಾಪಡೆ ವತಿಯಿಂದ ವಿಜಯ್ ದಿವಸ್ ಆಚರಿಸಲಾಯಿತು.
ಜಿಲ್ಲಾ ಕೇಂದ್ರ ಕಾರವಾರದ ವಾರ್‌ಷಿಪ್ ಮ್ಯೂಸಿಯಂ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಜ್ರಕೋಶ ಮುಖ್ಯಸ್ಥ ಸಜು ಜಾಯ್ ಹಾಗೂ ನೌಕಾ ಪಡೆಯ ಸಿಬ್ಬಂದಿ ಹಾಜರಿದ್ದರು. ಮೊದಲಿಗೆ 1971ರಲ್ಲಿ ನಡೆದ ಯುದ್ಧದಲ್ಲಿ ಪಾಲ್ಗೊಂಡು ವೀರಮರಣ ಹೊಂದಿದ ಮೇಜರ್ ಪರಮವೀರ ರಾಘೋಬ ರಾಣೆ ಅವರ ಸ್ಮಾರಕಕ್ಕೆ ಕಾರವಾರ ನೌಕಾಪಡೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿ ವರ್ಗದವರು ಹೂಗುಚ್ಚ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೌಕಾ ಪಡೆಯ ಸಿಬ್ಬಂದಿ ಮತ್ತು ಜಿಲ್ಲಾಧಿಕಾರಿ ಹರೀಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.