ಭಟ್ಕಳ: ಪ್ರಯಾಣಿಕರ ಸೋಗಿನಲ್ಲಿ ರೈಲಿನಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಯುವಕರನ್ನು ಭಟ್ಕಳ ರೈಲ್ವೇ ಪೊಲೀಸರು ಶುಕ್ರವಾರ ಬಂಧಿಸಿ ಆರೋಪಿಗಳಿಂದ ನಗದು ಹಾಗೂ ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲ್ ರಶೀದ್ (22) ಹಾಗೂ ಇಶಾಕ್(19) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇವರಿಂದ ಮೊಬೈಲ್ ಫೋನ್, ವಾಚ್, ಬ್ಯಾಗ್ ಹಾಗೂ 23,700 ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಯುವಕರಿಬ್ಬರು ಕಳ್ಳತನ ಮಾಡಿ ಭಟ್ಕಳದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಹಾರಿ ಶಿರೂರು ಕಡೆಗೆ ಓಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಬೆನ್ನಟ್ಟಿದ ರೈಲ್ವೆ ಪೊಲೀಸರು, ಅಂಡರ್ ಬ್ರಿಡ್ಜ್ ಅಡಿಯಲ್ಲಿ ಅಡಗಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಇವರು ಬೈಂದೂರಿನಿಂದ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸಿ ಎಸಿ ಕೋಚ್ಗೆ ತೆರಳಿ ಭಟ್ಕಳದಲ್ಲಿ ರೈಲು ನಿಲ್ಲಿಸಿದಾಗ ಕಳವು ನಡೆಸಿದ್ದರು. ರಶೀದ್ ತಾನು ಕದ್ದಿದ್ದ ವಸ್ತುಗಳನ್ನು ಇಶಾಕ್ಗೆ ಹಸ್ತಾಂತರಿಸಿ ರೈಲು ಹೋಗುತ್ತಿದ್ದ ಹಾಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ. ನಂತರ ಆರೋಪಿಗಳನ್ನು ಪೊಲೀಸರು ಪರಿಶೀಲಿಸಿದಾಗ ಬ್ಯಾಗ್ ದೊರೆತಿದ್ದು, ಬಳಿಕ ಬ್ಯಾಗ್ ಕಳೆದುಕೊಂಡಿದ್ದ ಸತ್ಯಭಾಮಾ ಮೆನನ್ ಅವರನ್ನ ಪೊಲೀಸರು ಸಂಪರ್ಕಿಸಿ ಅವರಿಗೆ ಬ್ಯಾಗ್ ಹಸ್ತಾಂತರಿಸಿದ್ದಾರೆ.
ಬಂಧಿತ ಆರೋಪಿಗಳು ಅ.30 ರಂದು ಮಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರೋರ್ವರ ಸರವನ್ನು ಅಪಹರಿಸಿದ್ದು, ಆರೋಪಿಗಳ ವಿರುದ್ಧ ಈಗಾಗಲೇ ಶೋನೂರ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿವೆ ಎಂದು ತಿಳಿದು ಬಂದಿದೆ.