ಕಾರವಾರ: ಕಲೆಯನ್ನೇ ನಂಬಿ ಬದುಕುತ್ತಿರುವ ರಂಗಭೂಮಿ ಕಲಾವಿದರು ಕೋವಿಡ್ ಲಾಕ್ ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕೂಡಲೇ ಸರ್ಕಾರ ನಾಟಕ, ಯಕ್ಷಗಾನ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವಂತೆ ಕಾರವಾರದ ರಂಗಭೂಮಿ ಕಲಾವಿದರ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಕಳೆದ 8 ತಿಂಗಳಿಂದ ರಂಗಭೂಮಿ ಕಲಾವಿದರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಇದರಲ್ಲಿ ಬಹುತೇಕ ಕಲಾವಿದರು ಕಲೆಯನ್ನೇ ನಂಬಿ ಬದುಕುತ್ತಿದ್ದವರು. ಜೊತೆಗೆ ರಂಗ ಪರಿಕರಗಳ ಪೂರೈಕೆದಾರರು, ಸಂಗೀತ ಸಂಯೋಜಕರು, ಧ್ವನಿ ವರ್ಧಕದವರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸದ್ಯ ಲಾಕ್ಡೌನ್ ತೆರವುಗೊಂಡಿದ್ದು, ಇನ್ನೇನು ಜಾತ್ರೆ, ವಾರ್ಷಿಕೋತ್ಸವಗಳು ಆರಂಭವಾಗುವುದರಿಂದ ನಾಟಕ, ಯಕ್ಷಗಾನ ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದು ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಕಲಾವಿದ ಬಾಬು ಶೇಖ್, ಕೋವಿಡ್ ನಿಂದಾಗಿ ತಾಲ್ಲೂಕಿನ ಸಾವಿರಾರು ಕಲಾವಿದರು ಹಾಗೂ ಧ್ವನಿವರ್ಧಕ ನೀಡುವವರ ಬದುಕು ಬೀದಿಗೆ ಬಂದಿದೆ. ಸರ್ಕಾರ ಕೋವಿಡ್ ನಿಯಮದೊಂದಿಗೆ ನಾಟಕ, ಯಕ್ಷಗಾನಗಳನ್ನು ನಡೆಸಲು ಕಲಾವಿದರಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ ಎಂದರು.