ಕಾರವಾರ: ಮನೆ ನಿರ್ಮಾಣಕ್ಕೆ ಭೂಮಿ ಸಮತಟ್ಟುಗೊಳಿಸುವ ವೇಳೆ ಸುರಂಗವೊಂದು ಪತ್ತೆಯಾಗಿದ್ದು, ಸುತ್ತಮುತ್ತಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ. ಇದೇನು ನಿಸರ್ಗ ನಿರ್ಮಿತ ಸುರಂಗವೋ ಅಥವಾ ಮಾನವ ನಿರ್ಮಿತ ಸುರಂಗವೋ ಎಂಬ ಚರ್ಚೆ ಶುರುವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಡಿವಾಳ ಗ್ರಾಮದ ನಿವಾಸಿಗಳಾಗಿರುವ ಗಣಪತಿ ಹೆಬ್ಬಾರ, ಲಿಂಗಪ್ಪ ಹೆಬ್ಬಾರ ಹಾಗೂ ಸತ್ಯನಾರಾಯಣ ಹೆಬ್ಬಾರ ಎಂಬುವವರಿಗೆ ಸೇರಿದ ಖಾಸಗಿ ಜಾಗದಲ್ಲಿ ಈ ಸುರಂಗ ಪತ್ತೆಯಾಗಿದೆ. ಮನೆ ನಿರ್ಮಾಣಕ್ಕೆ ನೆಲ ಸ್ವಚ್ಛಗೊಳಿಸಲಾಗುತ್ತಿತ್ತು. ಚಿರೆಕಲ್ಲು ಜಾಗವಾಗಿದ್ದರಿಂದ ಅಗೆದು ಕಳೆದ ಒಂದು ವಾರದಿಂದ ಸಮತಟ್ಟು ಮಾಡಲಾಗುತ್ತಿತ್ತು.
ಈ ಮಧ್ಯೆ ಭೂಮಿಯನ್ನು ಪಿಕಾಸಿಯಿಂದ ಅಗೆಯುವಾಗ ಕಬ್ಬಿಣಕ್ಕೆ ತಾಗಿದ ಶಬ್ದವೊಂದು ಬಂದಿದೆ. ಕೆಲಸಗಾರರೂ ಕುತೂಹಲದಿಂದ ಜೋರಾಗಿ ಅಗೆದಾಗ ಸುಮಾರು ಎರಡು ಮೀಟರ್ ಸುತ್ತಳತೆಯ ಜಾಗದಲ್ಲಿ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಹೆದರಿಕೊಂಡ ಕೆಲಸಗಾರರು ಮನೆಯ ಮಾಲೀಕನಿಗೆ ತಿಳಿಸಿದ್ದಾರೆ. ಬಳಿಕ ಕುಸಿದ ಜಾಗವನ್ನು ಪರಿಶೀಲಿಸಿ ಸುರಂಗದ ಒಳ ಹೋಗಿ ನೋಡಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಸುಮಾರು 50 ರಿಂದ 60 ಮೀಟರ್ ಸುರಂಗ ಇರುವುದು ಗೋಚರವಾಗಿದೆ.
ಸುರಂಗ ಪತ್ತೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ಪ್ರತಿನಿತ್ಯ ನೂರಾರು ಜನರು ಬಂದು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಬಂದಂತವರಿಗೆ ಏನಾದರು ತೊಂದರೆಯಾಗಬಹುದು ಎಂಬ ಹೆದರಿಕೆ ಶುರುವಾಗಿದೆ. ಆದ್ದರಿಂದ ಸುರಂಗದ ಒಳಗೆ ತೆರಳದಂತೆ ಜಾಗದ ಮಾಲೀಕರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
![Karwar](https://etvbharatimages.akamaized.net/etvbharat/prod-images/3375018_thdfgfjpg.jpg)
ಸುರಂಗ ಹೇಗೆ ಸೃಷ್ಟಿಯಾಗಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸುರಂಗದ ಮೇಲ್ಭಾಗದಲ್ಲಿ ಚಿರೆಕಲ್ಲಿನಂತ ಗಟ್ಟಿ ಕಲ್ಲುಗಳು ಉದ್ದಕ್ಕಿರುವುದು ಕಂಡು ಬರುತ್ತಿದೆ. ಇನ್ನು ಸುರಂಗದ ಕೆಳ ಬದಿಯಲ್ಲಿ ಜೇಡಿ ಮಣ್ಣಿನ ರೂಪದ ಮಣ್ಣು ಇರೋದು ಕಾಣಿಸುತ್ತಿದೆ. ಅಲ್ಲದೆ ಸುರಂಗದುದ್ದಕ್ಕೂ ಪಕ್ಕದಲ್ಲಿ ಸಣ್ಣ ಸಣ್ಣ ಹೊಂಡಗಳಿವೆ. ಮಳೆಗಾಲದ ಗುಡ್ಡದ ನೀರು ಇದೇ ಸುರಂಗದ ಮೂಲಕವೇ ಹರಿದು ಹೋಗಿ ಈ ರೀತಿ ಗುಹೆ ನಿರ್ಮಾಣವಾಗಿರಬಹುದು ಎಂದು ಜಾಗದ ಮಾಲೀಕರು ಹೇಳುತ್ತಿದ್ದಾರೆ.
ಸದ್ಯ ಸುರಂಗ ಪತ್ತೆಯಾಗಿರುವುದು ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಭಾಗದ ಜನರಲ್ಲಿ ಕುತೂಹಲ ಮೂಡಿಸಿದ್ದು, ಸುರಂಗ ಮಾನವ ನಿರ್ಮಿತವೋ, ಇಲ್ಲ ನಿಸರ್ಗ ನಿರ್ಮಿತವೋ ಎಂಬ ಚರ್ಚೆ ಶುರುವಾಗಿದೆ. ಸದ್ಯ ಸುರಂಗವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಮನೆ ಮಾಲೀಕರಿಗೆ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಈ ಬಗ್ಗೆ ಇತಿಹಾಸಕಾರರು ಅಧ್ಯಯನ ನಡೆಸಿದಲ್ಲಿ ಏನಾದರು ಮಾಹಿತಿ ಸಿಗಬಹುದಾಗಿದೆ.