ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ಬಿಎಸ್ಎನ್ಎಲ್ ಟವರ್ಗಳಿಂದ 4 ಜಿ ಸೇವೆ ಲಭ್ಯವಾಗಲಿದೆ.
ಕುಮಟಾದ ಮೂರುರು ಕ್ರಾಸ್ ಬಳಿ ಇರುವ ಬಿಎಸ್ಎನ್ಎಲ್ ಕಚೇರಿಯ ನೂತನ ಬಿಎಸ್ಎನ್ಎಲ್ ಕೇಂದ್ರ ಉದ್ಘಾಟಿಸಿದ ಬಿಎಸ್ಎನ್ಎಲ್ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ರಾಜಕುಮಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ತಿಂಗಳಿಗೆ 4-5 ಟವರ್ಗಳ ನಿರ್ಮಾಣದ ಗುರಿಯೊಂದಿಗೆ ಮುಂದಿನ 6 ತಿಂಗಳಲ್ಲಿ 4ಜಿ ಸೇವೆ ನೀಡಲು ಕಾರ್ಯ ಪ್ರವೃತ್ತರಾಗಿದ್ದೇವೆ. ಇನ್ನು 3-4 ತಿಂಗಳಲ್ಲಿ ನಮ್ಮ ಸಂಸ್ಥೆಯಿಂದ 4ಜಿ ಟೆಂಡರ್ ನಡೆದು ಜೂನ್ ಹೊತ್ತಿಗೆ 4ಜಿ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದರು.
ಇನ್ನು ಈ 4ಜಿ ಸೇವೆ ಹೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ತಂಡವು ಫ್ರಾಂಚೈಸಿಗಳ ಸಹಾಯದೊಂದಿಗೆ 4ಜಿ ಸೇವೆಯನ್ನು ಸ್ಪರ್ಧಾತ್ಮಕ ಗುಣಮಟ್ಟದಲ್ಲಿ ನೀಡುವ ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು. ಈವರೆಗೆ ಎಲ್ಲಾ ಕಂಪನಿಯ ಸೇವಾದಾರರು ದರ ಹೆಚ್ಚಳ ಮಾಡಿದ್ದರೂ ಬಿಎಸ್ಎನ್ಎಲ್ ಮಾತ್ರ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿ ಸಮಾಜದ ತಳಮಟ್ಟದಿಂದ ಎಲ್ಲ ವರ್ಗದ ಜನರ ಅಗತ್ಯಗಳಿಗೆ ಪೂರಕ ದರದಲ್ಲೇ ಇದೆ. ಮಾರುಕಟ್ಟೆಯ 25% ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದ್ದೇವೆ. 60 ಸಾವಿರಕ್ಕೂ ಹೆಚ್ಚು ನಮ್ಮ ಗ್ರಾಹಕರಿದ್ದಾರೆ ಎಂದರು.
ಈ ವೇಳೆ ಫ್ರಾಂಚೈಸಿ ಮಾಲಿಕರಾದ ವಾಸುದೇವ ಹನುಮಂತ ನಾಯಕ ಬೆಣ್ಣೆ, ಹನುಮಂತ ನಾಯಕ, ಪ್ರಸನ್ನ ನಾಯಕ, ವಿನಾಯಕ ನಾಯಕ ಸೇರಿದಂತೆ ಇನ್ನಿತರರು ಇದ್ದರು.