ಕಾರವಾರ: ಶಿರಸಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಸೇವನೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದ 15 ಯುವಕರ ಪೈಕಿ 12 ಮಂದಿ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದೆ.
ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.22ರಂದು ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಸ್ತೂರಬಾ ನಗರ, ನೆಹರು ನಗರ, ಇಂದಿರಾ ನಗರ, ಮರಾಠಿ ಕೊಪ್ಪ, ಕೆಹೆಚ್‌ಬಿ ಕಾಲೋನಿ, ಕೋಟೆ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ 15 ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದರು.
ಬಳಿಕ ಯುವಕರನ್ನು ವೈದ್ಯಕೀಯ ಪರೀಕ್ಷೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸದ್ಯ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು, ಕೆಹೆಚ್‌ಬಿ ಕಾಲೋನಿಯ ನಿವಾಸಿ ಅಬೀದ್ ರಫೀಕ್ (19), ಅಯ್ಯಪ ನಗರದ ರೋಷನ್ ಪಾಲೇಕರ (19), ದೀಪಕ ಕೇರಳಕರ (21), ವಿವೇಕಾ ನಂದ ನಗರದ ಪ್ರಥ್ವಿ ನಾರ್ವೇಕರ (26), ಗಣೇಶ ನಗರ 1ನೇ ಕ್ರಾಸ್‌ನ ಪ್ರಸನ್ನ ಕುರಬರ (42), ಕಸ್ತೂರಬಾ ನಗರದ ಮೊಹಮ್ಮದ್ ಮೊಸೀನ (23), ಮೊಹಮ್ಮದ್ ಯಾಸೀನ್ (25), ಪೈಜಲ್ ಖಾನ್ (26), ಕೋಟೆಕೆರೆ ಸಮೀರ ಅಹ್ಮದ್ (23), ಇಂದಿರಾ ನಗರದ ಮುಸ್ತಾಕ ಅಬ್ದುಲ್ ರೆಹಮಾನ್ (24), ಮನ್ಸೂರು ಅಬ್ದುಲ್ ಕರೀಂ (24), ನೆಹರೂ ನಗರದ ಶಿವಮೂರ್ತಿ ನಾಯ್ಕ (20) ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಇದೀಗ ಇವರ ವಿರುದ್ಧ ಎನ್ಡಿಪಿಎಸ್(ಅಕ್ರಮ ಮಾದಕ ವಸ್ತು ಸಾಗಾಣಿಕೆ ತಡೆ) ಕಾಯ್ದೆ 1985ರ ಅಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿವೈಎಸ್‌ಪಿ ರವಿ ಡಿ.ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಶಿರಸಿ ಹೊಸಮಾರುಕಟ್ಟೆ ಪಿಎಸ್‌ಐ ಭೀಮಾಶಂಕರ ಸಿನ್ನೂರ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಪ್ರಥಮ ಬಾರಿಗೆ ಶಿರಸಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಸದರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಪ್ರಶಂಸಿಸಿದ್ದಾರೆ. ಮಾದಕದ್ರವ್ಯ ಮಾರಾಟ ಮತ್ತು ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ತರಹದ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಸಿಬ್ಬಂದಿಯೊಂದಿಗೆ ನೋಡಲ್ ಅಧಿಕಾರಿ ಚೆಲ್ಲಾಟ ಆರೋಪ: ಫೋಟೋ, ವಿಡಿಯೋ ವೈರಲ್