ಭಟ್ಕಳ: 'ವಾಟ್ ಡು ಯೂ ನೋನ್' ಎಂಬ ಹಿಪ್ಆಪ್ ಹಾಡಿನ ಮೂಲಕ ಖ್ಯಾತಿ ಪಡೆದಿರುವ ರಿತುರಾಮ ಹಾಗೂ ದೇವಿದಾಸ್ ಮಾಫಿಯಾ ತಂಡ ರಚನೆಯ ‘ಅನ್ಕೊಂಡಂಗೆ' ಹಾಡಿನ ಆಡಿಯೋ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಜರುಗಿತು.
ಸಾಗರ ರಸ್ತೆಯಲ್ಲಿರುವ ಸೆಲ್ಫಿ ಡಯಾನ್-ಲಸ್ಸಿನ್ ಕೆಫೆ ರೆಸ್ಟೋರೆಂಟ್ನಲ್ಲಿ ಆಡಿಯೋ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಿತುರಾಮ ಅವರ ತಂದೆ ರಾಮಚಂದ್ರ ‘ಅನ್ಕೊಂಡಂಗೆ’ ಹಾಡಿನ ಆಡಿಯೋಯನ್ನು ಬಿಡುಗಡೆ ಮಾಡಿದ್ರು.
ಬಳಿಕ ಮಾತನಾಡಿದ ಅವರು, ಇದು ನನ್ನ ಮಗನ ಕನಸು. ಈ ಹಾಡನ್ನು 2 ವರ್ಷಗಳ ಹಿಂದೆಯೇ ತಯಾರಿಸಲಾಗಿತ್ತು. ಈ ಹಾಡನ್ನು ಕೇಳಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂಬ ಆಸೆ ಅವನದ್ದಾಗಿದೆ. ಹಾಲಿವುಡ್ ಮಾದರಿಯಲ್ಲಿ ಎಲ್ಲಾ ಸಂಗೀತದ ವಿಚಾರವನ್ನು ಕಲಿತು ತನ್ನದೇ ಆದ ವಿನೂತನ ರೀತಿಯಲ್ಲಿ ಹಾಡನ್ನು ರಚಿಸಿದ್ದಾನೆ. ಮುಂದಿನ ದಿನಗಳಲ್ಲಿ ಈತನಿಗೆ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.
ನಂತರ ರಿತುರಾಮ ಮಾತನಾಡಿ, ಸಾಕಷ್ಟು ಪರಿಶ್ರಮದಿಂದ ಈ ಹಾಡನ್ನು ರಚನೆ ಮಾಡಲಾಗಿದೆ. ವಿಶೇಷ ಮಾದರಿಯಲ್ಲಿ ಟ್ರ್ಯಾಕ್ ತಯಾರಿಸಿ ಅತ್ಯುತ್ತಮ ಸೌಂಡ್ನಲ್ಲಿ ಇದನ್ನು ತಯಾರಿಸಲಾಗಿದೆ. ಈಗಿನ ಯುವಕ-ಯುವತಿಯರ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಡನ್ನು ಮಾಡಿದ್ದೇವೆ. ಈಗಾಗಲೇ ಈ ಟ್ರ್ಯಾಕ್ ವಿಡಿಯೋದಲ್ಲಿ ಖ್ಯಾತ ದ್ವಿಭಾಷಾ ನಟ ಅಶ್ವಿನಿ ನಕ್ಷತ್ರ ಖ್ಯಾತಿಯ ಜೆ.ಕೆ. ಜಯರಾಮ್ ಕಾರ್ತಿಕ್ ನಟಿಸಲು ಒಪ್ಪಿಗೆ ನೀಡಿದ್ದಾರೆ. ಸದ್ಯ ನಟಿಯ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಿತುರಾಮ ಸಹೋದರ ನಿಖಿಲರಾಮ್, ಮಣಿ ಪೂಜಾರಿ ಸೇರಿದಂತೆ ದೇವಿದಾಸ ಮಾಫಿಯಾ ತಂಡದ ಸಹ ಸದಸ್ಯರು, ಸ್ನೇಹಿತರು ಉಪಸ್ಥಿತರಿದ್ದರು.