ಕಾರವಾರ: ಕೋವಿಡ್ ಲಸಿಕೆ ಪಡೆದು ಅರ್ಧಗಂಟೆ ವಿಶ್ರಾಂತಿ ಬಳಿಕ ವೃದ್ಧನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದ್ದು, ಸ್ಥಳೀಯರು ಮತ್ತು ಕುಟುಂಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೃದಯಾಘಾತದಿಂದ ಸಾವು!
ಅಂಕೋಲಾ ತಾಲೂಕಿನ ಕಂತ್ರಿ ನಿವಾಸಿ ಮಹಾದೇವ ಪುಟ್ಟು ನಾಯ್ಕ (67) ಮೃತ ವೃದ್ಧ. ಅಂಕೋಲಾ ಪಟ್ಟಣದ ಕೋವಿಡ್ ಲಸಿಕಾ ಕೇಂದ್ರಕ್ಕೆ ಪತ್ನಿಯೊಂದಿಗೆ ತೆರಳಿ ವ್ಯಾಕ್ಸಿನ್ ಪಡೆದಿದ್ದ ಇಬ್ಬರು ಅರ್ಧಗಂಟೆ ಅಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಬಳಿಕ ಜ್ವರ ಬರುವ ಸಾಧ್ಯತೆ ಇರುವ ಹಿನ್ನೆಲೆ ಮಾತ್ರೆಯನ್ನು ತಾಲೂಕು ಆಸ್ಪತ್ರೆಗೆ ತೆಗೆದುಕೊಳ್ಳಲು ಇಬ್ಬರು ನಡೆದುಕೊಂಡು ತೆರಳುತ್ತಿದ್ದಾಗ ಮಹಾದೇವಪ್ಪ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಐಸಿಯು ವಿಭಾಗಕ್ಕೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಹೃದಯಾಘಾತದಿಂದ ವ್ಯಕ್ತಿ ಸಾವಿಗೀಡಾಗಿರುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ. ನಿತಿನ್ ಹೊಸ್ಮೇಳಕರ್ ಮಾಹಿತಿ ನೀಡಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಾದೇವ:
ಆದರೆ ಮಹಾದೇವ ಅವರ ಸಾವಿನ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾವಿಗೀಡಾಗಿದ್ದ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೃತ ಮಹಾದೇವ ಜತೆ ಪತ್ನಿ ಸೇರಿ ಉಳಿದ 9 ಜನ ಲಸಿಕೆ ಪಡೆದಿದ್ದು ಯಾವುದೇ ಸಮಸ್ಯೆಯಾಗದ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಬಳಿಕ ವೈದ್ಯರು, ಪೊಲೀಸ್ ನಿರೀಕ್ಷಕ ಕೃಷ್ಣಾನಂದ ನಾಯ್ಕ್, ಪಿಎಸ್ಐ ಪ್ರೇಮನ ಗೌಡ ಪಾಟೀಲ್, ಕುಟುಂಬಸ್ಥರೊಂದಿಗೆ ಚರ್ಚಿಸಿ ವಾತಾವರಣ ತಿಳಿಗೊಳಿಸಿದ್ದಾರೆ.