ಉತ್ತರಕನ್ನಡ: ಲಾಕ್ಡೌನ್ ನಡುವೆಯೂ ಗೋವಾ ಬಳಿಯ ಕಡಲತೀರಗಳಲ್ಲಿ ಬೋಟ್‌ಗಳ ಮೇಲೆ ಜಿಲ್ಲೆಯ ಸಾವಿರಾರು ಮೀನುಗಾರರು ಸಿಲುಕಿಕೊಂಡಿದ್ದು, ಅವರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕರಾವಳಿ ತಾಲೂಕಿನ ವಿವಿಧ ಭಾಗಗಳ ಮೀನುಗಾರರು ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಆದರೆ ಇದೀಗ ಕೊರೊನಾ ವೈರಸ್ ಆತಂಕದಿಂದ ಲಾಕ್ಡೌನ್ ಘೋಷಣೆಯಾಗಿದ್ದರೂ ಅವರಿಗೆ ಮಾತ್ರ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಒಂದು ಟ್ರಾಲರ್ ಬೋಟ್‌ಗಳಲ್ಲಿ ಒಟ್ಟಿಗೆ 30 ಮೀನುಗಾರರು ಇರುತ್ತಾರೆ. ಇಂತಹ ಬೋಟ್‌ಗಳ ಮೂಲಕ ಸಾವಿರಾರು ಮೀನುಗಾರರಿದ್ದು, ಅವರಿಗೆ ಮಾಲೀಕರು ದಡದಲ್ಲಿ ಉಳಿಯುವುದಕ್ಕೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಬದಲಿಗೆ ಬೋಟ್‌ಗಳ ಮೆಲೆಯೇ ಇರುವಂತೆ ಸೂಚಿಸಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಈ ಬಗ್ಗೆ ಮೀನುಗಾರರನ್ನು ಫೋನ್ ಮೂಲಕ ಸಂಪರ್ಕಿಸಿದ ಅವರು, ಅಲ್ಲಿನ ಸಮಸ್ಯೆಯನ್ನು ಆಲಿಸಿದರು. ಮಾಲೀಕರನ್ನ ಕೇಳಿದ್ರೆ, ಇನ್ನು ಸ್ವಲ್ಪ ದಿನ ಲಾಕ್ಡೌನ್ ಮುಗಿಯುತ್ತದೆ ಎಂದು ಉದಾಸಿನ ತೋರುತ್ತಿದ್ದಾರೆ. ಅಲ್ಲದೆ ಅಲ್ಲಿನ ಮೀನುಗಳನ್ನ ವಾಹನಗಳ ಮೂಲಕ ರಾಜ್ಯಕ್ಕೂ ರಪ್ತು ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಕೂಡಲೇ ಮೀನುಗಾರರ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.